ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ ವಹಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ
ಮಂಗಳೂರು: ಬದುಕು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಂಡು ಅರಿವು ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ನಿರ್ದೇಶನ ನೀಡಿದರು.
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಡೆ ಕಾಯ್ದೆ ತಂತ್ರ ವಿಧಾನಗಳ ಕಾಯ್ದೆ ಅನುಷ್ಠಾನದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ಉಲ್ಲಂಘಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.
ಜಿಲ್ಲೆಯ ಪ್ರತಿಯೊಂದು ಸರಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಸರಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಮ್ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಪಿಸಿಪಿಎನ್‌ಡಿಟಿ ಕಾಯ್ದೆಯಡಿ ಲಿಂಗ ಪರೀಕ್ಷೆ ಮಾಡಲಾಗುವುದಿಲ್ಲ ಮತ್ತು ಶಿಕ್ಷಾರ್ಹ ಅಪರಾಧ ಎಂದು ಸ್ಥಳೀಯ ಭಾಷೆಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು ಎಂದು ತಿಪ್ಪೆಸ್ವಾಮಿ ಸೂಚಿಸಿದರು.
ಜಿಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ ನೋಂದಾಯಿಸಿಕೊಂಡು ಫಾರ್ಮ್ ಎಫ್‌ನಲ್ಲಿ ದಾಖಲೆಗಳನ್ನು ನಿರ್ವಹಿಸಬೇಕು. ಗರ್ಭಪಾತ ಅಥವಾ ಲಿಂಗ ಪರೀಕ್ಷೆಗೆ ಪ್ರೇರೇಪಿಸುವ ಆಸ್ಪತ್ರೆಗಳ ವಿರುದ್ಧ ದೂರು ನೀಡುವ ಮಾಹಿತಿದಾರರಿಗೆ ಸರಕಾರದಿಂದ 1 ಲಕ್ಷ ರೂ. ನೀಡಲಾಗುತ್ತದೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಪ್ಪೆಸ್ವಾಮಿ ಹೇಳಿದರು.
ಮಕ್ಕಳ ಮಾರಾಟ ಮಾಡಿದ್ದಲ್ಲಿ 2020ರ ಸೆಕ್ಷನ್ 18ರ ಪ್ರಕಾರ ದಂಡ ವಿಧಿಸಬಹುದು. ಗರ್ಭಿಣಿಯರು ಸ್ಕ್ಯಾನಿಂಗ್‌ಗೆ ಬರುವಾಗ ತಾಯಿ ಕಾರ್ಡ್ ಪಡೆದುಕೊಂಡಲ್ಲಿ ಮಾತ್ರ ಜನನ ಪ್ರಮಾಣ ಪತ್ರ ನೀಡುವ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಅವರು ಸೂಚಿಸಿದರು.
ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘನೆಯಡಿ ಮಾರ್ಚ್ 2025ರಿಂದ ಜನವರಿ 2026ರವರೆಗೆ 69 ನೋಟಿಸುಗಳನ್ನು ನೀಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸಂಸ್ಥೆಯನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದಾಗ ಪಿಸಿಪಿಎನ್‌ಡಿಟಿ ಕಾನೂನು ಮತ್ತು ಕಾಯ್ದೆ ಅನುಷ್ಠಾನ ಮಾಡುವಲ್ಲಿ ನ್ಯೂನ್ಯತೆಗಳು ಕಂಡು ಬಂದಾಗ ಅಂತಹ ಸ್ಕ್ಯಾನಿಂಗ್ ಸಂಸ್ಥೆ ಗಳಿಗೆ ನೋಟಿಸ್ ನೀಡಿ ಸರಿಪಡಿಸಲಾಗುತ್ತಿದೆ. ಫಾರ್ಮ್ ಎಫ್ ಅಕ್ರಮಗಳು ಕಂಡು ಬಂದಿರುವುದಿಲ್ಲ. ಫಾರ್ಮ್ ಎಫ್‌ಗಳನ್ನು ಕಾಲಕಾಲಕ್ಕೆ ಆಡಿಟ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಪಿಸಿಪಿಎನ್‌ಡಿಟಿ ಕಾಯ್ದೆ ಮತ್ತು ಕಾನೂನಿನ ಕುರಿತು ಸಂಸ್ಥೆಯ ಮಾಲಕರಿಗೆ ರೇಡಿಯೋಲಜಿಸ್ಟ್, ಗೈನಕಾಲಜಿಸ್ಟ್‌ಗಳಿಗೆ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಆರೋಗ್ಯ ಕಾರ್ಯಕರ್ತರಿಗೆ ಪಿಸಿಪಿಎನ್‌ಡಿಟಿ ಕಾಯ್ದೆ ಮತ್ತು ಕಾನೂನಿನ ಕುರಿತು ಮಾಹಿತಿ ನೀಡಲಾಗುತ್ತಿದೆ. ಲಿಂಗಾನುಪಾತ ಕಡಿಮೆ ಹಾಗೂ ಹೆಚ್ಚಿರುವ ಗ್ರಾಮಗಳನ್ನು ಗುರುತಿಸಿ ಲಿಂಗಾನುಪಾತ ಕುಸಿತಕ್ಕೆ ಕಾರಣ ಕಂಡುಹಿಡಿಯಲು ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗದಿಂದ ಅಧ್ಯಯನ ನಡೆಸಲು ಕ್ರಮಕೈಗೊಳ್ಳಾಗುತ್ತಿದೆ ಎಂದು ಡಾ. ದೀಪಾ ಪ್ರಭು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ಅಮೃತಾ ಭಂಡಾರಿ, ಜಿಲ್ಲಾ ತಪಾಸಣಾ ಮೇಲ್ವಿಚಾರಣಾ ಸಮಿತಿಯ ಸದಸ್ಯೆ ಡಾ.ಸುಂದರಿ, ಡಾ.ಅನಿತ್‌ರಾಜ್, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಡಾ.ನಂಜೇಶ್ ಕುಮಾರ್, ಡಾ.ಚಿದಾನಂದ ಮೂರ್ತಿ, ವಸಂತ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.
