ಸ್ತ್ರೀಯರಿಗೆ ಸಮಾನ ಅವಕಾಶಗಳು ಸಿಗಲಿ – ಜಿಲ್ಲಾಧಿಕಾರಿ ಕೂರ್ಮಾರಾವ್

Spread the love

ಸ್ತ್ರೀಯರಿಗೆ ಸಮಾನ ಅವಕಾಶಗಳು ಸಿಗಲಿ – ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಪಾತ್ರ ಮುಖ್ಯವಾಗಿದ್ದು ಸ್ತ್ರೀಯರಿಗೆ ಸಮಾನ ಅವಕಾಶಗಳು ಸಿಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಹಾಗೂ ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ ಹಾಗೂ ಪರ್ಯಾಯ ಕೃಷ್ಣಾಪುರ ಮಠ ಉಡುಪಿ ಸಹಯೋಗದೊಂದಿಗೆ ನಡೆದ ಅಂತರ ರಾಷ್ಟೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಪ್ರತಿ ರಂಗದಲ್ಲಿಯೂ ತೊಡಗಿಸಿಕೊಂಡು ಸೇವೆ ಸಲ್ಲಿಸಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕ್ರೀಡೆ, ಸಾಹಿತ್ಯ, ಕಲೆ, ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಸ್ಪರ್ಧೆ ನೀಡುತ್ತಿದ್ದಾರೆ. ಮಹಿಳೆಯರಿಗೆ ಎಲ್ಲಾ ಪ್ರಕಾರಗಳಲ್ಲೂ ಸೂಕ್ತ ಅವಕಾಶ ಸಿಗಬೇಕು. ಮಹಿಳೆಯರು ಸ್ಫೂರ್ತಿದಾಯಕ ಮಹಿಳೆಯರನ್ನ ಪ್ರೇರಣೆಯಾಗಿ ತೆಗೆದುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದರು.

ಒನ್ ಸ್ಟಾಪ್ ಸೆಂಟರ್ ಮತ್ತು ಸಾಂತ್ವನ ಕೇಂದ್ರಗಳಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ನೊಂದ ಮಹಿಳೆಯರಿಗೆ ಧೈರ್ಯ ತುಂಬುವ ಮೂಲಕ ನೊಂದ ಮಹಿಳೆಯರ ಸಮಸ್ಯೆ ಬಗೆಹರಿಸಿ ನೆರವು ನೀಡಬೇಕು. ಸಂತ್ರಸ್ತೆಯರಿಗೆ ಸ್ವಉದ್ಯೋಗ ಹೊಂದಲು ಪೂರಕವಾದ ವೃತ್ತಿ ತರಬೇತಿ ಸೇರಿದಂತೆ ಇತರೆ ಅವಕಾಶಗಳ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಖಾಸಗಿ ಅಥವಾ ಸರ್ಕಾರಿ ಯಾವುದೇ ಸಂಸ್ಥೆಯಾದರೂ ಮಹಿಳೆಯರ ಸುರಕ್ಷತೆ ಹಾಗೂ ಹಿತ ರಕ್ಷಣೆಯ ಉದ್ದೇಶದಿಂದ ಆಂತರಿಕ ಸಮಿತಿ ಕಡ್ಡಾಯವಾಗಿ ರಚನೆಯಾಗಬೇಕು. ಮಹಿಳೆಯರು ಸಮಸ್ಯೆಗೆ ಸಿಲುಕಿದಾಗ ಸಮಿತಿ ನೆರವಿಗೆ ದಾವಿಸಬೇಕು ಎಂದರು.

ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲದಂತೆ ಎಲ್ಲ ಕ್ಷೇತ್ರಗಳಲ್ಲಿ, ಎಲ್ಲ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಮಹಿಳಾ ದಿನಾಚರಣೆಯ ಉದ್ದೇಶ ಮಹಿಳೆಯರನ್ನ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದೆ. ಶೋಷಣೆ ದೌರ್ಜನ್ಯಗಳು ನಡದಾಗ ಮಹಿಳೆಯರು ಧೈರ್ಯವಾಗಿ ಮುಂದೆ ಬಂದು ಹೇಳಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ದಿನದಂದು ಮಾತ್ರವಲ್ಲ ಪ್ರತಿದಿನ ಮಹಿಳೆಯರಿಗೆ ಗೌರವ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರ ರಕ್ಷಣೆಗೆ ಹಲವು ಕಾನೂನುಗಳು ಇದ್ದರೂ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಮಹಿಳೆಯರನ್ನು ಸಮಾಜ ನೋಡುವ ದೃಷ್ಟಿಕನ ಬದಲಾಗಲಿ, ಪುರುಷರು ಕೂಡ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದರು.

ಕಲೆ, ಕ್ರೀಡೆ, ಸಂಸ್ಕೃತಿ ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲಾಯಿತು. ಮಹಿಳೆಯರು ಉತ್ಪಾದಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ .ಎಚ್ ಕೃಷ್ಣಪ್ಪ, ಕಾರ್ಯದರ್ಶಿ ವಸಂತಿ ರಾವ್, ಕುಂದಾಪುರ ಮಹಿಳಾ ಮಂಡಲದ ಅಧ್ಯಕ್ಷೆ ರಾಧಾ ದಾಸ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ಪ್ರೇಮಾ ಇದ್ದರು.


Spread the love

Leave a Reply

Please enter your comment!
Please enter your name here