ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಮೇಶ್ ಕಾಂಚನ್ ಬೆಂಬಲ

Spread the love

ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಮೇಶ್ ಕಾಂಚನ್ ಬೆಂಬಲ

ಉಡುಪಿ: ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ, ಬೆಂಗಳೂರು ಇವರ ನೇತೃತ್ವದಲ್ಲಿ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಸ್ಯಾನಿಟರಿ ಸೂಪರ್‌ವೈಸರ್, ಲೋಡರ್ಸ್, ಕ್ಲೀನರ್ಸ್, ಒಳಚರಂಡಿ ಕಾರ್ಮಿಕರು, ಡಿ.ಇ.ಓ, ಎಸ್.ಟಿ.ಪಿ ಆಪರೇಟರ್ಸ್, ಕಚೇರಿ ಸಹಾಯಕರು ಸೇರಿದಂತೆ ಎಲ್ಲಾ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಧರಣಿಯನ್ನು ಉಡುಪಿ ಜಿಲ್ಲೆಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘವು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿತ್ತು.

ಈ ಧರಣಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪಾಲ್ಗೊಂಡು ಎಲ್ಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರಿಗೆ ತಮ್ಮ ಬೆಂಬಲ ಸೂಚಿಸಿ, ಸರ್ಕಾರವು ಇಂತಹ ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಉತ್ಸವ, ಸಮಾವೇಶ ಮುಂತಾದ ಕಾರ್ಯಕ್ರಮಕ್ಕೆ ದುಂದು ವೆಚ್ಚ ಮಾಡಲು ಹಣವಿದೆ ಆದರೆ ಇಂತಹ ಪ್ರಾಮಾಣಿಕ ಕೆಲಸಗಾರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಹಣವಿಲ್ಲ ಎಂದು ಹೇಳಿಕೆ ನೀಡುವುದು ಹಾಸ್ಯಾಸ್ಪದ.

ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರವನ್ನು ಸ್ವಚ್ಛ ಇಡುವಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಅವರ ಈ ಉದ್ಯೋಗದಲ್ಲಿ ಅಭದ್ರತೆ ಇದೆ. ರಾಜ್ಯ ಸರ್ಕಾರವು ತಮ್ಮ ಈ ಪ್ರಾಮಾಣಿಕ ಬೇಡಿಕೆಯನ್ನು ಈಡೇರಿಸಬೇಕು, ತಮ್ಮ ಅಹವಾಲು ಸ್ವೀಕರಿಸಿ ತಾವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕು ಎಂದು ಅವರಲ್ಲಿ ತಿಳಿಸುತ್ತಾ ತಾನು ಸಂಪೂರ್ಣವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ತಮಗೆ ಬೆಂಬಲ ನೀಡಿ ತಮ್ಮ ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಅವರಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಹಾಬಲ ಕುಂದರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರು, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಶರತ್ ಶೆಟ್ಟಿ ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.


Spread the love