ಸ್ಮಾರ್ಟ್ ತರಗತಿಯ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂತ ಅಭಿವೃದ್ಧಿಯಾಗುತ್ತದೆ: ಶಾಸಕ ವೇದವ್ಯಾಸ್ ಕಾಮತ್  

Spread the love

ಸ್ಮಾರ್ಟ್ ತರಗತಿಯ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂತ ಅಭಿವೃದ್ಧಿಯಾಗುತ್ತದೆ: ಶಾಸಕ ವೇದವ್ಯಾಸ್ ಕಾಮತ್  

ಮಂಗಳೂರು: ಕಾಲೇಜು ಶಿಕ್ಷಣ ಇಲಾಖೆ ತಂದಿರುವ ಸ್ಮಾರ್ಟ್ ತರಗತಿಯ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂತ ಅಭಿವೃದ್ಧಿಯಾಗುವುದರೊಂದಿಗೆ ತಾಂತ್ರಿಕವಾಗಿ ಬೆಳೆಯಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.

ಅವರು ಇಂದು ಡಾ.ದಯಾನಂದ ಪೈ-ಸತೀಶ್ ಪೈ ಕಾಲೇಜಿನ ಸಭಾಂಗಣದಲ್ಲಿ ನಡೆದ ಡಾ.ದಯಾನಂದ ಪೈ-ಸತೀಸ್ ಪೈ ಕಾಲೇಜಿನ 14 ಹಾಗೂ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 6 ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಕನಾಟಕ ಎಲ್.ಎಂ.ಎಸ್ ಆಧಾರಿತ ಡಿಜಿಟಲ್ ತರಗತಿಯ ಕಲಿಕೆಯ ವ್ಯವಸ್ಥೆಯು ಸ್ವ-ಕಲಿಕೆಗೆ ಸಮಗ್ರ ವೇದಿಕೆಯಾಗಿದೆ. ಇದು ಎಲ್ಲರಿಗೂ ಅಗತ್ಯ ಸಮಯ ಮತ್ತು ಸ್ಥಳಗಳಲ್ಲಿ ಡಿಜಿಟಲ್ ಕಲಿಕೆಯ ಸೌಲಭ್ಯವನ್ನು ಒದಗಿಸಲು ಅವಶ್ಯಕವಾಗಿದೆ ಎಂದರು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ತಾರತಮ್ಯವಿಲ್ಲದೇ ಏಕರೀತಿಯ ವಿದ್ಯಾಭ್ಯಾಸ ಪಡೆಯುವಲ್ಲಿ ಡಿಜಿಟಲ್ ಕಲಿಕೆ ಪ್ರಮುಖ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳು ಪೂರಕವಾದ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಯನ್ನು ಮಾಡುವಲ್ಲಿ ನಿರತರಾಗಬೇಕು ಎಂದರು.

ವಿದ್ಯಾರ್ಥಿಗಳು ಹೊಸ ರೀತಿಯ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳದೇ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವ ಮೂಲಕ ಸಮಾಜದಲ್ಲಿರುವ ತೊಡಕುಗಳನ್ನು ಅಳಿಸಬೇಕು ಎಂದರು.

ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ವಸಂತರಾಜ್ ಶೆಟ್ಟಿ ಕೆ, ಕದ್ರಿ ವಾರ್ಡ್‍ನ ಮಹಾನಗರ ಪಾಲಿಕೆಯ ಸದಸ್ಯ ಮನೋಹರ್ ಶೆಟ್ಟಿ, ರಥಬೀದಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್.ಸಿ, ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ| ಜಗದೀಶ ಬಾಳಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love