
ಸ್ವಂತ ಸೂರಿಲ್ಲದ ನಿರ್ಗತಿಕರಿಗೆ ಸೂರು ಯೋಜನೆ
ಪಿರಿಯಾಪಟ್ಟಣ: ಸ್ವಂತ ಸೂರಿಲ್ಲದ ನಿರ್ಗತಿಕರನ್ನು ಗುರುತಿಸಿ ಸೂರು ಕಲ್ಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದು ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ ತಿಳಿಸಿದರು.
ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಪುಟ್ಟಮ್ಮ ಎಂಬುವವರಿಗೆ ಮನೆ ಹಸ್ತಾಂತರಿಸಿ ಅವರು ಮಾತನಾಡಿ, ಜ್ಞಾನವಿಕಾಸ ಯೋಜನೆಯಡಿ ಪೂಜ್ಯ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಯೋಜನೆಯಾಗಿದ್ದು ತಾಲೂಕಿನಲ್ಲಿ 52 ಮಂದಿ ನಿರ್ಗತಿಕರು ಅಂಗವಿಕಲರನ್ನು ಗುರುತಿಸಿ ಅವರಿಗೆ ಮಾಸಾಶನ ಯೋಜನೆ ಜಾರಿಗೊಳಿಸಲಾಗಿದೆ ಅಲ್ಲದೆ ವರ್ಷದಲ್ಲಿ ಎರಡು ಬಾರಿ ಬಟ್ಟೆ ಮತ್ತು ಪಾತ್ರೆ ಕಿಟ್ ಸಹ ನೀಡಲಾಗುತ್ತಿದೆ ಇದರೊಂದಿಗೆ ಮನೆ ಇಲ್ಲದವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಇದಕ್ಕಾಗಿ ಯೋಜನೆ ವತಿಯಿಂದ 97 ಸಾವಿರ ರೂ ನೀಡಲಾಗಿದೆ ಎಂದರು.
ಪಿರಿಯಾಪಟ್ಟಣ ವಲಯ ಯೋಜನಾಧಿಕಾರಿ ಸುರೇಶ್ ಶೆಟ್ಟಿ ಅವರು ಮಾತನಾಡಿ ವಾತ್ಸಲ್ಯ ಯೋಜನೆಯಲ್ಲಿ ಗ್ರಾಮಸ್ಥರು ಪ್ರಗತಿಬಂಧು ಸ್ವಸಹಾಯ ಸಂಘದವರು ಪುಟ್ಟಮ್ಮರಿಗೆ ನೆರವು ನೀಡಿದ್ದರಿಂದ ಸ್ವಂತ ಸೂರು ನಿರ್ಮಿಸಲು ಸಹಕಾರಿಯಾಗಿದ್ದು, ಮಹಿಳಾ ಸಬಲೀಕರಣ ಜತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ, ಕನಕ ಭವನ ಕಾರ್ಯದರ್ಶಿ ಚಂದ್ರು, ಮುಖಂಡರಾದ ನಾಗರಾಜು, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾರದ, ಮೇಲ್ವಿಚಾರಕಿ ಭಾಗೀರಥಿ, ಸೇವಾ ಪ್ರತಿನಿಧಿ ಶ್ರೀಮತಿ, ಒಕ್ಕೂಟದ ಅಧ್ಯಕ್ಷೆ ಗೌರಮ್ಮ, ಹಾಗೂ ಊರಿನ ಮುಖಂಡರು ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.