ಸ್ವಚ್ಚತಾಗಾರರಿಗೆ ವೇತನ ತಾರತಮ್ಯ ಮಾಡದಂತೆ ಡಿಸಿ ಸೂಚನೆ

Spread the love

ಸ್ವಚ್ಚತಾಗಾರರಿಗೆ ವೇತನ ತಾರತಮ್ಯ ಮಾಡದಂತೆ ಡಿಸಿ ಸೂಚನೆ

ಮಂಡ್ಯ: ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿ ಕೆಲಸ ಮಾಡುತ್ತಿರುವ ಸ್ವಚ್ಚತಾಗಾರರಿಗೆ ಕನಿಷ್ಠ ವೇತನ ನೀಡುವಲ್ಲಿ ತಾರತಮ್ಯ ಮಾಡದೇ ಸರ್ಕಾರ ನಿಗದಿಪಡಿಸಿರುವ ವೇತನವನ್ನು ಪಾವತಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ರವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ವೃತ್ತಿ ನಿಷೇಧ ಮತ್ತು ಪುನರ್ ವಸತಿ ಕಾಯ್ದೆ 2013ರ ಮತ್ತು ನಿಯಮ 2013ರನ್ನು ಅನುಷ್ಠಾನ ಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ಜಾಗೃತಿ ಮೂಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾಗಾರರಿಗೆ ಇ.ಎಸ್.ಐ ಹಾಗೂ ಪಿ.ಎಫ್ ಸೌಲಭ್ಯಗಳನ್ನು ಒದಗಿಸಲು ನಿಯಮಾನುಸಾರ ಕ್ರಮವಹಿಸಿ ತಾಲ್ಲೂಕು ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಸ್ವಚ್ಚತಾ ಸಿಬ್ಬಂದಿಗಳ ಅರ್ಹ ವೇತನವನ್ನು ನಿಯಮಾನುಸಾರ ಅವರ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾಗುತ್ತಿದೆ. ಈಗಾಗಲೇ ಎಲ್ಲಾ ಸ್ವಚ್ಚತಾ ಸಿಬ್ಬಂದಿಗಳಿಗೆ ಮೂರನೇ ವ್ಯಕ್ತಿಯಿಂದ ಅಥವಾ ಟೆಂಡರ್‌ದಾರರಿಂದ ಹಣ ವಾಪಸ್ ನೀಡುವಂತೆ ಬೇಡಿಕೆ ನೀಡಿದಲ್ಲಿ ಅಥವಾ ಬೆದರಿಸಿದಲ್ಲಿ ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ದೂರು ನೀಡಲು ಸೂಚಿಸಿ ಎಂದರು.

ಸ್ವಚ್ಚತಾಗಾರರಿಗೆ ಸ್ಮಶಾನಭೂಮಿ ಸೌಲಭ್ಯಕ್ಕೆ ಅನುಕೂಲವಾಗುವಂತೆ ಎಲ್ಲಾ ಸ್ಮಶಾನ ಭೂಮಿಗಳಲ್ಲಿ ಸಾರ್ವಜನಿಕ ಸ್ಮಶಾನ ಎಂದು ಬೋರ್ಡ್ ಗಳನ್ನು ಅಳವಡಿಸುವುದರ ಜೊತೆಗೆ ಸ್ಮಶಾನದಲ್ಲಿ ನೀರು, ಕಾಂಪೌಂಡ್ ಹಾಗೂ ಇನ್ನಿತರ ಸೌಲಭ್ಯಗಳನ್ನು ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಾಂತಾ ಎಲ್.ಹುಲ್ಮನಿ ಅವರು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯ, ಸಮಾಜ ಕಲ್ಯಾಣ ಇಲಾಖೆಯ ಉರ್ದೇಶಕರು ರಂಗೇಗೌಡ, ಜಿ.ಪಂ.ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಸದಸ್ಯರಾದ ನಂಜುಂಡಮೌರ್ಯ, ಕೃಷ್ಣ, ಪಳಿನಿಯಮ್ಮ, ಪಾಪಮ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love