ಸ್ವಸ್ಥ, ಸುಸ್ಥಿರ ಕರ್ನಾಟಕ ನಿರ್ಮಾಣದ ಗುರಿ: ಡಾ.ಕೆ. ಸುಧಾಕರ್

Spread the love

ಸ್ವಸ್ಥ, ಸುಸ್ಥಿರ ಕರ್ನಾಟಕ ನಿರ್ಮಾಣದ ಗುರಿ: ಡಾ.ಕೆ. ಸುಧಾಕರ್

ಬೆಂಗಳೂರು: ಸ್ವಸ್ಥ, ಸುಸ್ಥಿರ ಕರ್ನಾಟಕ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡ.ಕೆ. ಸುಧಾಕರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ವತಿಯಿಂದ ಹಮ್ಮಿಕೊಳ್ಳಲಾದ ಅಪೌಷ್ಠಿಕತೆ ಮತ್ತು ರಕ್ತಹೀನತೆ (ಅನೀಮಿಯಾ) ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರೂಪಿಸಲಾದ ಕಾರ್ಯತಂತ್ರ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕೋವಿಡ್ 19ರ ಸಂದರ್ಭದಲ್ಲಿ ಸಹ ರಾಜ್ಯ ಹಲವು ಕಾರ್ಯತಂತ್ರ ಅಳವಡಿಸಿ ಯಶಸ್ವಿಯಾಗಿದೆ. ಅಪೌಷ್ಠಿಕತೆ ಹಾಗೂ ಅನೀಮಿಯಾ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ. ಇದನ್ನು ಕಾರ್ಯಗತಗೊಳಿಸಲು ಯಾವುದೇ ಸಹಕಾರ ನೀಡಲು ತಾವು ಸಿದ್ದ ಎಂದರು. ಕರ್ನಾಟಕದಲ್ಲಿ 6 ರಿಂದ 59 ತಿಂಗಳ ವಯೋಮಾನದ ಶೇಕಡಾ 65.50 ರಷ್ಟು, 15-19 ವರ್ಷದೊಳಗಿನ ಶೇಕಡಾ 49.4 ರಷ್ಟು ಬಾಲಕಿಯರು, 15-19 ವರ್ಷದೊಳಗಿನ ಶೇಕಡಾ 26.5 ರಷ್ಟು ಬಾಲಕರು, 15-49 ರೊಳಗಿನ ಶೇ.ರಷ್ಟು ಮಹಿಳೆಯರು (ಬಾಣಂತಿಯರು ಸೇರಿ) ಹಾಗೂ ಶೇ. 45.7 ರಷ್ಟು ಗರ್ಭಿಣಿಯರು ಅನೀಮಿಯಾ (ರಕ್ತಹೀನತೆ) ದಿಂದ ಬಳಲುತ್ತಿದ್ದಾರೆ. ದೇಶದ 5 ವರ್ಷದೊಳಗಿನ ಶೇ.45ರಷ್ಟು ಮಕ್ಕಳ ಸಾವು ಅಪೌಷ್ಠಿಕತೆಯಿಂದ ಸಂಭವಿಸುತ್ತಿದೆ.

ಮಗುವಿನ ಜೀವನದಲ್ಲಿ ಮೊದಲ 1000 ದಿನಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಸಮಯದಲ್ಲಿ ಅವರ ಮೊದಲ ಬೆಳವಣಿಗೆ ಆಗುವುದರಿಂದ ಮಕ್ಕಳಿಗೆ ಪೌಷ್ಠಿಕ ಆಹಾರದ ಅವಶ್ಯಕತೆ ಹೆಚ್ಚಿರುತ್ತದೆ. ಗರ್ಭಿಣಿಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ ಅಪೌಷ್ಠಿಕ ಅಥವಾ ಮರಣ ಹೊಂದಿದ ಮಕ್ಕಳು ಹುಟ್ಟುವ ಸಂಭವ ಹೆಚ್ಚಿರುತ್ತದೆ. ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಮತ್ತು ಪೌಷ್ಠಿಕತೆ ಬಹಳ ಮುಖ್ಯವೆನಿಸುತ್ತದೆ. ಗ್ರಾಮೀಣ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ವೈದ್ಯಕೀಯ ಶಿಕ್ಷಣ ಹೀಗೆ ಹಲವು ಇಲಾಖೆ ಸಮನ್ವಯದಿಂದ ಕರ್ನಾಟಕವನ್ನು ಅಪೌಷ್ಠಿಕತೆ ಹಾಗೂ ಅನೀಮಿಯಾ ಮುಕ್ತ ರಾಜ್ಯವನ್ನಾಗಿ ಮಾಡಬಹುದಾಗಿದೆ. ಅಲ್ಲದೆ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇದರ ತಡೆ ಸಾಧ್ಯ. ಈ ಬಾರಿ ಬಜೆಟ್‍ನಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ರಾಜ್ಯದ 8250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅನಿಮೀಯಾ ನಿವಾರಣೆಗೆ ಆಗಿಂದ್ದಾಗೆ ತಪಾಸಣೆ ಅತ್ಯಗತ್ಯ. ಹಾಗೆಯೇ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿ ಹಳ್ಳಿ ಹಳ್ಳಿಗೂ ತಲುಪಿಸಬೇಕೆಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಅಪೌಷ್ಠಕತೆ ಮತ್ತು ಅನಿಮೀಯ ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದೆ. ಕೆಳಹಂತದಿಂದ ಮೇಲಿನ ಹಂತದವರೆಗೂ ಸಮಸ್ಯೆಗಳನ್ನು ಗುರುತಿಸಿ ಅದರ ಪರಿಹಾರಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಬೇಕು. ಇದಕ್ಕೆ ಇತರ ಇಲಾಖೆಗಳ ಸಮನ್ವಯದ ಅವಶ್ಯಕತೆ ಇರುವುದರಿಂದ ಎಲ್ಲರೂ ಕೈಜೋಡಿಸಬೇಕೆಂದರು.

ನೀತಿ ಆಯೋಗದ ಸದಸ್ಯರು (ಆರೋಗ್ಯ) ಡಾ.ವಿ.ಕೆ. ಪೌಲ್ ಮಾತನಾಡಿ ಭಾರತದ ಶೇಕಡ 65ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇವರಿಗೆ ನಿತ್ಯ ತಪಾಸಣೆ ಜೊತೆಗೆ ಕಬ್ಬಿಣ ಫಾಲಿಕ್ ಮಾತ್ರೆಗಳ ಪೂರೈಕೆ ಮಾಡಬೇಕು. 6 ತಿಂಗಳವರೆಗೆ ಮಕ್ಕಳಿಗೆ ಎದೆಹಾಲು ನೀಡಬೇಕು. ನಂತರ ಪೂರಕ ಆಹಾರ ಪ್ರಾರಂಭಿಸಬೇಕು. ಶೇಕಡ 46 ರಷ್ಟು ಪ್ರಕರಣಗಳಲ್ಲಿ 6 ತಿಂಗಳು ಪೂರೈಸಿದೆ ಮಕ್ಕಳಿಗೆ ಪೂರಕ ಆಹಾರ ನೀಡಲಾಗುತ್ತಿಲ್ಲ ಎಂದರು.

ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ. ರಾಜೀವ್ ಬಾಲ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್, ವಿವಿಧ ಜಿಲ್ಲೆಗಳ ಜಿಲ್ಲಾಪಂಚಾಯತ್ ಸಿ.ಇ.ಓಗಳು, ಇಲಾಖಾ ಮುಖ್ಯಸ್ಥರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


Spread the love