ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಶ್ರದ್ಧೆ, ತ್ಯಾಗ ಹಾಗೂ ರಾಷ್ಟ್ರ ಜಾಗೃತಿಯ ಪ್ರತೀಕ – ಕೆ ರಾಜು

Spread the love

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಶ್ರದ್ಧೆ, ತ್ಯಾಗ ಹಾಗೂ ರಾಷ್ಟ್ರ ಜಾಗೃತಿಯ ಪ್ರತೀಕ – ಕೆ ರಾಜು

ಕುಂದಾಪುರ: ಇತಿಹಾಸ ಹೇಳುವಂತೆ ತ್ಯಾಗ-ಬಲಿದಾನ ಮತ್ತು ಆತ್ಮಗೌರವದ ಬಗ್ಗೆ ಮುಂದಿನ ಜನಾಂಗಗಳಿಗೆ ತಿಳಿಸಿದಾಗ ಮಾತ್ರ ದೇಶದ ಪ್ರಖ್ಯಾತಿ, ವೈಭವ ನಿರಂತರ ಜಾಗೃತಿಯಿಂದ ಇರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಮಂತ ಚರಿತ್ರೆ, ಶ್ರೇಷ್ಠ ಪರಂಪರೆ, ಸಾಂಸ್ಕೃತಿಕ ವೈವಿಧ್ಯತೆ ಹೊಂದಿರುವ ನಮ್ಮ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕ್ಷಣ ಅತ್ಯಂತ ಮಹತ್ವದ್ದಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಹೇಳಿದರು.

ಅವರು ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯು ಶ್ರದ್ಧೆ, ತ್ಯಾಗದ ಸ್ಮರಣೆ ಹಾಗೂ ರಾಷ್ಟ್ರ ಜಾಗೃತಿಯ ಪ್ರತೀಕವಾಗಿದೆ. ಸ್ವಾತಂತ್ರ್ಯದ 75 ವರ್ಷಗಳ ಈ ಅಧ್ಯಾಯ ಪ್ರಸ್ತುತ ತಲೆಮಾರಿನ ಮುನ್ನಡೆಗೆ ನಿರಂತರ ಪ್ರೇರಣೆ ಹಾಗೂ ಅನ್ವೇಷಣೆಗೆ, ಭರವಸೆಯ ದಿಕ್ಕಿನತ್ತ ಸಾಗಲು ಹೊಸ ಹುರುಪು ನೀಡುವ ಮಹಾದಿನ ಎಂದರು.

ಉಡುಪಿ ಜಿಲ್ಲೆ ಉದಯವಾಗಿ 25 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ರಜತ ಮಹೋತ್ಸವದ ಅವಳಿ ಸಂಭ್ರಮ ನಮ್ಮದಾಗಿದೆ. ಶಿಕ್ಷಣ, ವೈದ್ಯಕೀಯ, ಪವಾಸೋದ್ಯಮ, ಧಾರ್ಮಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುರುತಿಸಬಹುದಾದ ಅಭಿವೃದ್ಧಿ ಹೊಂದಿರುವ ನಾವು, ಸ್ವಾತಂತ್ರ್ಯ ಚಳುವಳಿಯಲ್ಲೂ ಅಗ್ರಗಣ್ಯ ಕೊಡುಗೆ ನೀಡಿದ್ದೇವೆ ಎಂದರು.

ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿ, ಶುಭಕೋರಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯರು, ಜನಪ್ರತಿನಿಧಿಗಳು, ಡಿವೈಎಸ್‍ಪಿ ಶ್ರೀಕಾಂತ್ ಕೆ., ಕುಂದಾಪುರ ತಾ.ಪಂ. ಇಒ ಮಹೇಶ್ ಹೊಳ್ಳ, ತಾಲೂಕು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್. ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ನಗರ ವ್ಯಾಪ್ತಿಯ ಶಾಲಾ- ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗಾಂಧಿ ಮೈದಾನವನ್ನು ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಕುಂದಾಪುರ ನಗರವು ತ್ರಿವರ್ಣ ಧ್ವಜ, ತ್ರಿವರ್ಣ ಬೆಳಕಿನಿಂದ ಕಂಗೊಳಿಸುತ್ತಿತ್ತು.

ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ವೈಭವದ ಮೆರವಣಿಗೆ:
ಧ್ವಜಾರೋಹಣಕ್ಕೂ ಮುನ್ನ ಕುಂದಾಪುರದ ಜೂನಿಯರ್ ಕಾಲೇಜಿನಿಂದ ಗಾಂಧಿ ಮೈದಾನದವರೆಗೆ ವಿವಿಧ ತಂಡಗಳ ಬೃಹತ್ ಮೆರವಣಿಗೆಯು ಮತ್ತಷ್ಟು ಮೆರುಗು ತಂದಿತು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಧ್ವಜಾರೋಹಣಗೈದು, ಮೆರವಣಿಗೆಗೆ ಚಾಲನೆ ನೀಡಿದರು. ಕುಂದಾಪುರ ಪೆÇಲೀಸ್ ತಂಡ, ಎನ್‍ಸಿಸಿ ತಂಡ, ಸೈಂಟ್ ಜೋಸೆಫ್ ಪ್ರೌಢಶಾಲೆಯ ಎನ್‍ಸಿಸಿ ಬ್ಯಾಂಡ್ ಸೆಟ್, ಭಾರತಾಂಬೆ ಟ್ಯಾಬ್ಲೋ, ಜೂನಿಯರ್ ಕಾಲೇಜು ಪ್ರೌಢಶಾಲೆಯ ಎನ್‍ಸಿಸಿ ತಂಡ, ಕೀಲು ಕುದುರೆ, ಚೆಂಡೆ ವಾದನ, ಪೌರ ಕಾರ್ಮಿಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳ ತಂಡ, ಜನಪ್ರತಿನಿಧಿಗಳು, ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ತಂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಬಳಿಕ ಗಾಂಧಿ ಮೈದಾನಕ್ಕೆ ಸಾಗಿತು.

ಪೌರ ಕಾರ್ಮಿಕರಿಂದ ಪಥ ಸಂಚಲನ:
ಧ್ವಜಾರೋಹಣದ ಅನಂತರ ಆಕರ್ಷಕ ಪಥ ಸಂಚಲನ ನಡೆಯಿತು. ಎಸಿ ಕೆ. ರಾಜು ಗೌರವ ವಂದನೆ ಸ್ವೀಕರಿಸಿದರು. ಕುಂದಾಪುರ ಎಸ್‍ಐ ಸದಾಶಿವ ಗವರೋಜಿ ಕಮಾಂಡ್ ನೀಡಿದರು. ಪೋಲೀಸ್ ತಂಡ, ಗೃಹ ರಕ್ಷಕದಳ, ಸೈಂಟ್ ಮೇರಿಸ್, ವೆಂಕಟರಮಣ, ಸೈಂಟ್ ಜೋಸೆಫ್, ಹೋಲಿ ರೋಜರಿ ಶಿಕ್ಷಣ ಸಂಸ್ಥೆಗಳ, ವಡೇರಹೋಬಳಿ ಶಾಲೆ, ಗರ್ಲ್ಸ್ ಶಾಲೆಗಳ ಎನ್‍ಸಿಸಿ, ಸ್ಕೌಟ್- ಗೈಡ್ಸ್ ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಕುಂದಾಪುರ ಪುರಸಭೆಯ ಸ್ವಚ್ಛತೆಯ ಸೇನಾನಿಗಳಾದ ಪೌರ ಕಾರ್ಮಿಕರು ಹೊಸ ಸಮವಸ್ತø ಶ್ಯೂ ಧರಿಸಿ ತ್ರಿವರ್ಣ ಧ್ವಜ ಹಿಡಿದು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಶವಾಗಿತ್ತು. ಪೌರ ಕಾರ್ಮಿಕರು ಗೌರವ ವಂದನೆ ಸಲ್ಲಿಸುವ ವೇಳೆ ವಿದ್ಯಾರ್ಥಿಗಳು ಹಾಗೂ ನೆರೆದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗಳನ್ನೇ ಸುರಿಸಿ ಮತ್ತಷ್ಟು ಹುರಿದುಂಬಿಸಿದರು.


Spread the love