ಸ್ವಾತಂತ್ರ್ಯ ಹೋರಾಟಕ್ಕೆ ತುಳುನಾಡಿನ ಕೊಡುಗೆ ಎಂದಿಗೂ ಮರೆಯಬಾರದು – ಶ್ರೀಕಾಂತ್ ಶೆಟ್ಟಿ

Spread the love

ಸ್ವಾತಂತ್ರ್ಯ ಹೋರಾಟಕ್ಕೆ ತುಳುನಾಡಿನ ಕೊಡುಗೆ ಎಂದಿಗೂ ಮರೆಯಬಾರದು – ಶ್ರೀಕಾಂತ್ ಶೆಟ್ಟಿ

ಮಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಉಳ್ಳಾಲದ ಅಬ್ಬಕ್ಕ, ಕೊಡಗಿನ ವೀರ ರಾಜರು ನಡೆಸಿದ ಸಾಹಸದ ಹೋರಾಟಗಳನ್ನು ಎಂದಿಗೂ ಮರೆಯುವಂತಿಲ್ಲ ಎಂದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಹೇಳಿದರು.

ಅವರು ಶನಿವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಂಟರ ಭವನದಲ್ಲಿ ನಡೆದ ಅಮೃತ ಭಾರತಿಗೆ ಗಾನ ನುಡಿಯ ದೀವಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದ ತುಳುನಾಡಿನಲ್ಲಿ ಅನೇಕ ಸಾಹಸದ ಹೋರಾಟಗಳು ನಡೆದಿವೆ ಆದರೆ ತುಳುನಾಡಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಯಾವ ಪಠ್ಯ ಪುಸ್ತಕದಲ್ಲೂ ಇಲ್ಲ. ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ತುಳುನಾಡಿನ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಬಲಿದಾನದ ಕುರಿತಾಗಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.

ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ನಡೆಸಿದ ಹೋರಾಟ ಹಾಗೂ ಕೊಡಗು ಸುಳ್ಯದಲ್ಲಿ ನಡೆದ ಅಮರ ಸುಳ್ಯ ಕ್ರಾಂತಿ ದಂಗೆಯ ವೀರರಾಜರು ರಾಮೇಗೌಡ, ನಂದಾವರದ ಬಂಗರಸರು, ಉಪ್ಪಿನಂಗಡಿಯ ಮಂಜ ಇವರೆಲ್ಲರ ಶ್ರಮವನ್ನು ತುಳುನಾಡು ಎಂದಿಗೂ ಮರೆಯ ಬಾರದು ಎಂದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್, ದಕ ಎಸ್ಪಿ ಹೃಷಿಕೇಶ್ ಸೋನಾವಾನೆ, ಹಾಗೂ ಇತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬಿಸಿ ರೋಡಿನಿಂದ ಬ್ರಹ್ಮರಕೂಟ್ಲು ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ತ್ರಿವರ್ಣ ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.


Spread the love