ಸ್ವಾಮೀಜಿಗಳು, ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡ ಗುರ್ಮೆ ಗೋ ವಿಹಾರ ಕೇಂದ್ರ

Spread the love

ಸ್ವಾಮೀಜಿಗಳು, ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡ ಗುರ್ಮೆ ಗೋ ವಿಹಾರ ಕೇಂದ್ರ

ಉಡುಪಿ: ಎಲ್ಲಿಯ ತನಕ ಭಾರತದಲ್ಲಿ ಗೋವಿಗೆ ರಕ್ಷಣೆ, ಭಗವಾ ಧ್ವಜಕ್ಕೆ ಹಾಗೂ ಮಹಿಳೆಯರಿಗೆ ಗೌರವ ಲಭಿಸುವುದಿಲ್ಲವೋ ಅಲ್ಲಿಯ ತನಕ ನಾವು ಸ್ವತಂತ್ರ ಭಾರತೀಯರು ಎನ್ನಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಸಚಿವ ಈಶ್ವರಪ್ಪ ಹೇಳೀದರು.

ಅವರು ಭಾನುವಾರ ಗುರ್ಮೆ ಫೌಂಡೇಶನ್‌ ಕಳತ್ತೂರು ವತಿಯಿಂದ ಕಳತ್ತೂರು ಗ್ರಾಮದ ಗುರ್ಮೆಯಲ್ಲಿ ನೂತನವಾಗಿ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದರು.

ಗೋವಿನಲ್ಲಿ ಕೋಟ್ಯಾನು ಕೋಟಿ ದೇವತೆಗಳು ವಾಸ ಮಾಡುತ್ತಾರೆ ಎಂದು ನಂಬಿಕೊಂಡು ಬಂದಿರುವ ನಾವು ಗೋಹತ್ಯಾ ನಿಷೇಧ ಕಾಯಿದೆಗೆ ಆದ್ಯತೆ ನೀಡಿ ಅದನ್ನು ಜಾರಿಗೆ ತರಲಾಗಿದೆ. ಅದನ್ನು ತರುವಾಗ ಹಲವಾರು ಮಂದಿ ವಿರೋಧ ಮಾಡಿದ್ದರೂ ಕೂಡ ಗೋವಿನ ರಕ್ಷಣೆ ನಮ್ಮ ಪ್ರತಿಯೊಬ್ಬ ಭಾರತೀಯನ ಹೊಣೆ ಎಂಬ ಪ್ರತಿಜ್ಞೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು. ಅದರೊಂದಿಗೆ ಕೇಸರಿ ಬಣ್ಣಕ್ಕೆ ಮತ್ತು ಮಹಿಳೆಗೆ ಎಲ್ಲಿಯ ತನಕ ಗೌರವ ಸಿಗುವುದಿಲ್ಲವೋ ಅಲ್ಲಿಯ ತನಕ ನಮಗೆ ಸ್ವಾತಂತ್ರ್ಯ ಲಭಿಸಿಲ್ಲ ಎಂದು ಅವರು ಹೇಳಿದರು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ ತಾಯಿಯ ಸೇವೆ ಎಲ್ಲಿ ಎಲ್ಲಾ ಮಾಡಲು ಸಾಧ್ಯವಿದೇಯೋ ಅದನ್ನು ಮಾಡಬೇಕು. ಗೋವಿನ ಸೇವೆ ಕೂಡ ತಾಯಿಯ ಸೇವೆಯಾಗಿದೆ. ಗೋ ಮಾತೆ ಎಲ್ಲಾ ತೊಂದರೆಗಳನ್ನು ಸಹಿಸಿ ನಮ್ಮನ್ನು ಅನುಗ್ರಹಿಸುತ್ತದೆ. ಗುರ್ಮೆಯವರು ತನ್ನ ತಾಯಿಯ ಸೇವೆಯನ್ನು ಮಾಡಿದ್ದು ಈಗ ಗೋ ಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಗೋವಿನ ಅನುಗ್ರಹವಿದ್ದರೆ ನಮ್ಮ ಎಲ್ಲಾ ಕಾರ್ಯಕ್ರಮಗಳು ಫಲಿಸುತ್ತವೆ ಎಂದು ಹೇಳಿದರು.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ಗೋ ಶಾಲೆಯೊಂದಿಗೆ ಗುರ್ಮೆ ಸುರೇಶ್‌ ಶೆಟ್ಟಿಯವರು ಸಮಾಜದ ದೀನರಿಗೆ ದುರ್ಬಲರಿಗೆ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ. ಇಂತಹ ಸ್ಮೂರ್ತಿ ಅವರಿಗೆ ಲಭಿಸಿರುವುದು ಗೋ ಮಾತೆಯಿಂದ ಎನ್ನುವುದನ್ನು ಮರೆಯಬಾರದು. ಸಮಾಜದಿಂದ ನಾವೇನು ಪಡೆದಿದ್ದೆವೆ ಅದನ್ನು ವಾಪಾಸು ನೀಡುವ ಗುಣ ಪ್ರತಿಯೊಬ್ಬರಲ್ಲಿ ಕೂಡ ಇರಬೇಕು ಎಂದು ಹೇಳಿದರು.

 ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಶ್ರೀ ವಿನಯ ಗುರೂಜಿ ಮಾತನಾಡಿ ಆದ್ಯಾತ್ಮಿಕವಾಗಿ ನೋಡಿದರೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳಿದ್ದರೆ, ವೈಜ್ಞಾನಿಕವಾಗಿ ಎಲ್ಲಿ ಗೋವಿನ ಉಸಿರಿದೆಯೋ ಅಲ್ಲಿ ಕಾಯಿಲೆಗಳಿಲ್ಲ. ಗೋವಿನ ಉಪಯೋಗವನ್ನು ಪ್ರತಿಯೊಬ್ಬ ವ್ಯಕ್ತಿ ಕೂಡ ಪಡೆಯುತ್ತಾನೆ ಎನ್ನುವುದನ್ನು ಯಾರು ಕೂಡ ಅಲ್ಲಗಳೆಯುವುದಿಲ್ಲ ಎಂದರು.

ಇದೇ ವೇಳೆ ಸಾಂತ್ವಾನ ಕಾರ್ಯಕ್ರಮದಡಿ ಸುಮಾರು 500 ಮಂದಿ ಅನಾರೋಗ್ಯ ಪೀಡಿತರಿಗೆ ಧನ ಸಹಾಯ, 280 ಮಂದಿ ಕೊರೋನಾ ವಾರಿಯರ್ಸ್‌ ಗೆ ಸಮ್ಮಾನ, ಪೌರ ಕಾರ್ಮಿಕರಿಗೆ ಗೌರವಾರ್ಪಣೆ ಕಾರ್ಯಕ್ರಮ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌, ಡಾ ಜೀವನ್‌ ಕಿಣಿ ಮುಂಬಯಿ, ಸಾಹಿತಿ ಡಾ ಭರತ್‌ ಕುಮಾರ್‌ ಪೊಲಿಪು, ಸೂರಿ ಶೆಟ್ಟಿ ಕಾಪು ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ ಸುನೀಲ್‌ ಕುಮಾರ್‌, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಆರ್‌ ಮೆಂಡನ್‌, ಭರತ್‌ ಶೆಟ್ಟಿ, ಸಂಸದರಾದ ಬಿ ವೈ ರಾಘವೇಂದ್ರ, ಎಮ್‌ ಆರ್‌ ಜಿ ಗ್ರೂಪ್‌ ಇದರ ಮುಖ್ಯಸ್ಥರಾದ ಕೆ ಪ್ರಕಾಶ್‌ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್‌, ಗುರ್ಮೆ ಫೌಂಡೇಶನ್‌ ಅಧ್ಯಕ್ಷ ಸುರೇಶ ಪಿ ಶೆಟ್ಟಿ ಗುರ್ಮೆ ಹಾಗೂ ಇತರರು ಉಪಸ್ಥಿತರಿದ್ದರು.

ಗುರ್ಮೆ ಫೌಂಡೇಶನ್‌ ಅಧ್ಯಕ್ಷ ಸುರೇಶ ಪಿ ಶೆಟ್ಟಿ ಗುರ್ಮೆ ಸ್ವಾಗತಿಸಿ, ಕಾರ್ಯದರ್ಶಿ ಶಿವರಾಮ್‌ ಶೆಟ್ಟಿ ಧನ್ಯವಾದವಿತ್ತರು. ದಾಮೋದರ ಶರ್ಮ ಮತ್ತು ನಿತಿನ್‌ ಕುಮಾರ್‌ ಎಕ್ಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು   ಶ್ರಿಕಾಂತ ಶೆಟ್ಟಿ ಕಾರ್ಕಳ ಮತ್ತು ಬಳಗ, ಸಂದೇಶ ನೀರುಮಾರ್ಗ ಮತ್ತು ಬಳಗ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗುರು ನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ದಕ್ಷ ಯಜ್ಞ-ರಾಜಾ ರುದ್ರ ಕೋಪ ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು.


Spread the love