
ಸ್ವಾವಲಂಬಿ ಮಹಿಳೆಯರಿಗೆ ನ್ಯಾಯ ಸಿಗದಿದ್ದರೆ ಅಮರಣಾಂತ ಉಪವಾಸ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಎಚ್ಚರಿಕೆ
ಕುಂದಾಪುರ: ಅಧಿಕಾರಿಗಳಿಗೆ ಒತ್ತಡ ಹೇರಿ ವಂಡ್ಸೆಯ `ಸ್ವಾವಲಂಬನಾ’ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ರಾತ್ರಿ ವೇಳೆ ತೆರವು ಮಾಡಿರುವ ಶಾಸಕರ ನಡೆ ಖಂಡನೀಯ. ಸ್ವಾವಲಂಬನಾ ಕೇಂದ್ರದ ಸುಮಾರು ಎಪ್ಪತ್ತು ಮಹಿಳೆಯರಿಗೆ ಸೂಕ್ತ ನೆಲೆ ಸಿಗುವವರೆಗೂ ನಾವು ಈ ಹೋರಾಟವನ್ನು ಕೈಬಿಡುವುದಿಲ್ಲ. ಮಹಿಳೆಯರಿಗೆ ನ್ಯಾಯ ಸಿಗದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಬÉೈಂದೂರಿನ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ. ಗೋಪಾಲ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ ವಂಡ್ಸೆಯ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಆಶ್ರಯದಲ್ಲಿ ನಾಡ ಗ್ರಾ.ಪಂ. ಕಚೇರಿ ಎದುರು ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
ವಂಡ್ಸೆ ಪಂಚಾಯತ್ ಅಧೀನದಲ್ಲಿ ಸ್ವಉದ್ಯೋಗ ನಡೆಸುತ್ತಿದ್ದ ಮಹಿಳೆಯರಿಗೆ ಶಾಸಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಿರುವುದು ನಿಜಕ್ಕೂ ದುಃಖಕರ ಸಂಗತಿ. ಬÉೈಂದೂರು ಕ್ಷೇತ್ರದಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುವ ಮಹಿಳೆಯರಿಗೆ ರಕ್ಷಣೆಯೇ ಇಲ್ಲವೇ. ಇನ್ನಾದರೂ ಶಾಸಕರು ತಮ್ಮ ತಪ್ಪನ್ನು ತಿದ್ದಿಕೊಂಡು ಈ ನೊಂದ ಬಡ ಮಹಿಳೆಯರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲು ಮುಂದಾಗಲಿ ಎಂದವರು ಹೇಳಿದರು. ಆಗಿನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಹೊಲಿಗೆ ಯಂತ್ರವನ್ನು ತುಳಿದು ಉದ್ಘಾಟನೆ ಮಾಡಿದ್ದಾರೆ. ಆದರೆ ಇಂದು ಅದೇ ಯಂತ್ರವನ್ನು ರಾತ್ರೋರಾತ್ರಿ ಜಡಿಮಳೆಯಲ್ಲಿ ಹೊರಗೆ ತಂದು ಯಾವುದೇ ಭದ್ರತೆ ಇಲ್ಲದ ಹಳೆ ಕಟ್ಟಡದಲ್ಲಿ ಹಾಕಿದ್ದಾರೆ. ಅಧಿಕಾರ ಸ್ವೀಕಾರ ಮಾಡುವಾಗ ಮಹಿಳೆಯರಿಗೆ ರಕ್ಷಣೆ ಕೊಡುತ್ತೇವೆ, ಸಾಮಾಜಿ ನ್ಯಾಯ ಕೊಡಿಸುತ್ತೇವೆ ಎಂದು ಪ್ರಮಾಣ ಮಾಡಿದ ಶಾಸಕರು ಈಗ ಅವೆಲ್ಲದಕ್ಕೂ ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ. ಸ್ವಚ್ಛ ಆಡಳಿತಕ್ಕೆ ಇಡೀ ರಾಜ್ಯದ ಕಣ್ಣುನೆಟ್ಟಿರುವ ವಂಡ್ಸೆ ಪಂಚಾಯತ್ ಅನ್ನು ಶಾಸಕರು ಇಂದು ತನಿಖೆಗೆ ಆದೇಶ ಮಾಡಿದ್ದಾರೆ. ವಂಡ್ಸೆ ಪಂಚಾಯತ್ ಕಾರ್ಯವೈಖರಿಯನ್ನು ನೋಡಿ ಶಾಸಕರೆ ಹಾಡಿಹೊಗಳಿದಿದ್ದಾರೆ. ಆದರೆ ಇಂದು ಅವರೇ ಪಂಚಾಯತ್ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತನಿಖೆಗೆ ಆದೇಶ ನೀಡಿರುವುದು ಹಾಸ್ಯಾಸ್ಪದ. ಏನೇ ತನಿಖೆ ನಡೆದರೂ ಅವೆಲ್ಲವನ್ನೂ ಎದುರಿಸಲು ಸಿದ್ದರಿದ್ದೇವೆ ಎಂದು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ವಂಡ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕೆನಡಿ ಪಿರೇರಾ, ಮತ್ತಿತರರು ಮಾತನಾಡಿದರು.
ಕಾಂಗ್ರೆಸ್ ನಾಯಕ ರಾಜು ಪೂಜಾರಿ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯರಾದ ಜಗದೀಶ್ ದೇವಾಡಿಗ, ಪ್ರಮೀಳಾ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬÉೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಮುಖಂಡರಾದ ಸಂತೊಷ್ ಕುಮಾರ್ ಶೆಟ್ಟಿ ಬಲಾಡಿ, ಅರವಿಂದ ಪೂಜಾರಿ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.