ಹಕ್ಕಿ ಜ್ವರ, ಜಿಲ್ಲೆಯಲ್ಲಿ ಕಟ್ಟೆಚ್ಚರ; ಅಂತರ್ ಜಿಲ್ಲಾ ಕೋಳಿ ಸಾಗಾಟಕ್ಕೆ ನಿರ್ಬಂಧ ಇಲ್ಲ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಹಕ್ಕಿ ಜ್ವರ, ಜಿಲ್ಲೆಯಲ್ಲಿ ಕಟ್ಟೆಚ್ಚರ; ಅಂತರ್ ಜಿಲ್ಲಾ ಕೋಳಿ ಸಾಗಾಟಕ್ಕೆ ನಿರ್ಬಂಧ ಇಲ್ಲ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಹಕ್ಕಿ ಜ್ವರ ಪಸರಿಸದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇತರ ಜಿಲ್ಲೆಗಳಿಂದ ಬರುವ ಕೋಳಿ ಸಾಗಾಟದ ವಾಹನಗಳನ್ನು ಗಡಿ ಪ್ರದೇಶದಲ್ಲಿ ಪರೀಕ್ಷೆ ಮಾಡಿ ಜಿಲ್ಲೆಯ ಒಳಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ಯಾವುದೇ ರೀತಿ ಅಂತರ್ ಜಿಲ್ಲಾ ಕೋಳಿ ಸಾಗಾಟಕ್ಕೆ ನಿರ್ಬಂಧ ವಿಧಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಹಕ್ಕಿಜ್ವರ ಸೋಂಕು ಕಾಣಿಸಿಕೊಂಡಿಲ್ಲದ ಕಾರಣ ಜನರು ಆತಂಕ ಪಡುವ ಅಗತ್ಯವಿಲ್ಲ ಆದರೆ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಹಕ್ಕಿಗಳು ಅಥವಾ ಸಾಕಿದ ಕೋಳಿ ಅಸ್ವಾಭಾವಿಕವಾಗಿ ಮೃತಪಟ್ಟರೆ ತಕ್ಷಣವೇ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಇದಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಿದ್ದು ಅಲ್ಲಿನ 0820-2534024 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು. ಕೋಳಿ ಶೀತಜ್ವರ (ಹಕ್ಕಿ ಜ್ವರ) ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಹಕ್ಕಿ ಜ್ವರ ಬಂದಿದೆ ಎಂಬ ಭೀತಿಯಿಂದ ಸಾರ್ವಜನಿಕರು ಕೋಳಿ ಮಾಂಸ ತಿನ್ನುವುದನ್ನು ಬಿಡಬೇಕಾಗಿಲ್ಲ ಸರಿಯಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.

ಕೋಳಿ ಸಾಕಣಿಕಾ ಕೇಂದ್ರಗಳಲ್ಲು ಹಾಗೂ ಪೌಲ್ಟ್ರಿ ಫಾರಂ ಗಳನ್ನು ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ದಿನ 5 ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಕಳುಹಿಸುವ ನಿಟ್ಟಿನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಕೋಳಿ ಮಾಂಸ ಮಾರಾಟ ಕೇಂದ್ರಗಳು ಮತ್ತು ಕೋಳಿ ಸಾಗಣೆ ವಾಹನಗಳ ಮೇಲೆ ನಿಗಾ ಇಡಲೂ ಸೂಚನೆ ನೀಡಿದ್ದಾರೆ.

ಕೋಳಿಫಾರಂ ಗಳಲ್ಲಿ ಪರಿಶೀಲನೆ ನಡೆಸಬೇಕು. ಕೋಳಿ ಫಾರಂ ಪ್ರದೇಶದಲ್ಲಿ ಸೋಂಕು ನಿವಾರಕಗಳನ್ನು ಬಳಸಿ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಕೋಳಿ ಫಾರಂಗಳ ಮಾಲೀಕರಿಗೆ ತಾಕೀತು ಮಾಡಬೇಕು. ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಕೋಳಿ ಫಾರಂಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ಮಾಡಬೇಕು. ಯಾವುದೇ ಅರಣ್ಯ ಪ್ರದೇಶ, ಕೆರೆ ಕಟ್ಟೆ ನೀರು ನಿಲ್ಲುವ ಪ್ರದೇಶಗಳಲ್ಲಿ ವಲಸೆ ಹಕ್ಕಿಗಳು ಅಥವಾ ಯಾವುದೇ ಹಕ್ಕಿಗಳ ಅಸಹಜ ಸಾವು ಕಂಡುಬಂದಲ್ಲಿ, ತ್ವರಿತವಾಗಿ ಸ್ಪಂದಿಸುವ ಕಾರ್ಯ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.


Spread the love