
ಹಟ್ಟಿಯಂಗಡಿ: ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನ ಉದ್ಘಾಟನೆ
ಕುಂದಾಪುರ: ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಇಲ್ಲಿಗೆ ಸಮೀಪದ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸಭಾಭವನ ನಿರ್ಮಿಸುವ ಉದ್ದೇಶ ಇರಿಸಿಕೊಳ್ಳಲಾಗಿದ್ದು, ಇದೀಗ ಮೊದಲ ಸಭಾಭವನ ಉದ್ಘಾಟನೆಯಾಗುತ್ತಿರುವುದು ಸಂತೋಷವನ್ನು ತಂದಿದೆ. ದಲಿತ ಸಮುದಾಯದವರಿಗೆ ಮಂಜೂರಾಗಿರುವ ಭೂಮಿಗಳಿಗೆ ಸಂಬಂಧಿಸಿದ ಹಕ್ಕು ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಬಂಧುಗಳಿಗೂ ಸರ್ಕಾರದ ನೀಡಲಾಗುವ ಎಲ್ಲ ಯೋಜನೆಗಳನ್ನು ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದ್ದು, ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೊರಗ ಸಮುದಾಯದವರು ನೇರವಾಗಿ ನನ್ನ ಬಳಿಗೆ ಬರುತ್ತಿರುವುದು ನನಗೆ ವಯಕ್ತಿಕವಾಗಿ ಖುಷಿ ತಂದಿದೆ ಎಂದು ಅವರು ತಿಳಿಸಿದರು.
ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮೃತ ಪಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ, ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ)ಯ ರಾಜ್ಯಾಧ್ಯಕ್ಷ, ತಲ್ಲೂರು ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಗುಲ್ವಾಡಿ ಪಂಚಾಯಿತಿ ಉಪಾಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಘವೇಂದ್ರ ವರ್ಣೇಕರ್, ಗುತ್ತಿಗೆದಾರ ರಾಜೀವ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ. ರಾಜು ಶೆಟ್ಟಿ ಕೆಂಚನೂರು, ಶಶಿಕುಮಾರ್ ಗುಡ್ಡೆಯಂಗಡಿ, ಮಂಜುನಾಥ ಗುಡ್ಡೆಯಂಗಡಿ, ಚಂದ್ರ ಮೊಗವೀರ ಹಟ್ಟಿಯಂಗಡಿ, ಲೀಲಾವತಿ ಗಾಣಿಗ, ವಿಠಲ್ ಶೆಟ್ಟಿ, ನಾಗರತ್ನ, ದಲಿತ ಮುಖಂಡರುಗಳಾದ ನಾಗರಾಜ್ ಕೆಂಚನೂರು, ಪಲ್ಲವಿ ಇದ್ದರು.
ಮೋಹನ್ ಗುಡ್ಡೆಯಂಗಡಿ ಸ್ವಾಗತಿಸಿ, ನಿರೂಪಿಸಿದರು.