ಹಣಕಾಸು, ವೈಯಕ್ತಿಕ ದ್ವೇಷದಿಂದ ಸುರೇಂದ್ರ ಬಂಟ್ವಾಳ್ ಹತ್ಯೆ

Spread the love

ಹಣಕಾಸು, ವೈಯಕ್ತಿಕ ದ್ವೇಷದಿಂದ ಸುರೇಂದ್ರ ಬಂಟ್ವಾಳ್ ಹತ್ಯೆ

ತಾಲೂಕಿನ ಬಿ.ಸಿ.ರೋಡ್ ಸಮೀಪದ ಭಂಡಾರಿಬೆಟ್ಟುವಿನ ವಸತಿ ಸಂಕೀರ್ಣದಲ್ಲಿ ಅ.20ರಂದು ನಡೆದ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ತಲುಪಿದ್ದು, ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದ್ದು ಒಂದೆರಡು ದಿನಗಳಲ್ಲಿ ಅವರ ಬಂಧನವೂ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ( 28), ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು(36),ಬಂಟ್ವಾಳ ಮಂಡಾಡಿ ನಿವಾಸಿ ಶರೀಫ್ ಯಾನೆ ಸಯ್ಯದ್ ಶರೀಫ್ (34), ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ (42), ಶರಣ್ ಯಾನೆ ಆಕಾಶ್‌ ಭವನ ಶರಣ್ (35), ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ರಾಜೇಶ್ ( 33), ಮಂಗಳೂರು ಪಂಪ್ ವೆಲ್ ನಿವಾಸಿ ದಿವ್ಯರಾಜ್ ( 30), ಇನ್ನೋರ್ವ ಪಂಪ್ ವೆಲ್ ನಿವಾಸಿ ಅನಿಲ್ ಪಂಪ್‌ವೆಲ್ (35) ಬಂಧಿತ ಆರೋಪಿಗಳು ಎಂದು ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ 1 ಬೈಕ್, 2 ಕಾರು, ಹಲವು ಮೊಬೈಲ್ ಫೋನ್ ಗಳು ಹಾಗೂ 2.50 ಲಕ್ಷ ರೂ. ನಗದು ವಶಪಡಿಸಲಾಗಿದ್ದು ಇನ್ನು ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳ ಬಂಧನಕ್ಕಾಗಿ ಜಿಲ್ಲೆಯ ವಿವಿಧ ಠಾಣೆಗಳ ನುರಿತ ಸಿಬ್ಬಂದಿಯನ್ನೊಳಗೊಂಡ 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಸತೀಶ್ ಕುಲಾಲ್ ಮತ್ತು ಗಿರೀಶ್ ನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ಸುರೇಂದ್ರ ಅವರ ಸ್ನೇಹಿತನಾಗಿದ್ದ ಆರೋಪಿ ಪ್ರದೀಪ್ ತನ್ನ ಚಿನ್ನದ ಉದ್ಯಮಕ್ಕಾಗಿ ಸುರೇಂದ್ರರಿಂದ ಸಾಲ ಪಡೆದಿದ್ದ. ಅದರಲ್ಲಿ 7 ಲಕ್ಷ ರೂ. ವಾಪಸ್ ನೀಡಲು ಬಾಕಿ ಇತ್ತು. ಈ ಹಣವನ್ನು ಸುರೇಂದ್ರರಿಗೆ ವಾಪಸ್ ಕೊಡುವ ವಿಚಾರದಲ್ಲಿ ಕೊಲೆ ಕೃತ್ಯ ನಡೆಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಎಸ್ಪಿಯವರ ಪ್ರಕಟಣೆ ತಿಳಿಸಿದೆ.

ಸುರೇಂದ್ರನ ಕೊಲೆ ನಡೆಸಲೆಂದು ಆರೋಪಿ ಪ್ರದೀಪ್ 2 ಲಕ್ಷ ರೂ. ವನ್ನು ಆಕಾಶ್ ಭವನ ಶರಣ್ ಗೆ ಅತನ ಪರಿಚಿತನ ಮೂಲಕ ಪೂರೈಸಿದ್ದಾನೆ. ಈ ಅಪರಿಚಿತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ‌. ಹಾಗೆಯೇ ಆರೋಪಿ ವೆಂಕಪ್ಪ ಕೂಡ ಸುರೇಂದ್ರರಿಂದ ಸಾಲ ಪಡೆದಿದ್ದು ಸಾಲ ವಾಪಸ್ ನೀಡಲು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸುರೇಂದ್ರನ ಕೊಲೆಗೆ ಆರೋಪಿ ಸತೀಶ್ ಗೆ ಮುಂಗಡವಾಗಿ 90 ಸಾವಿರ ರೂ. ನೀಡಿದ್ದು ಕೃತ್ಯದ ಬಳಿಕ ಹೆಚ್ಚಿನ ಹಣ ನೀಡುವ ಭರವಸೆಯಿತ್ತಿದ್ದ‌ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶರೀಫ್ ಸುರೇಂದ್ರ ಬಂಟ್ವಾಳ್ ಮೇಲಿನ ವೈಯಕ್ತಿಕ ದ್ವೇಷದಿಂದ ಕೃತ್ಯದಲ್ಲಿ ಇತರ ಆರೋಪಿಗಳಿಗೆ ಸಹಕರಿಸಿದ್ದಾನೆ. ಆರೋಪಿ ಶರಣ್ ಸುರೇಂದ್ರ ಬಂಟ್ವಾಳ್ ಮೇಲೆ ವೈಯಕ್ತಿಕ ದ್ವೇಷ ಹೊಂದಿದ್ದರಿಂದ ಆರೋಪಿ ಗಿರೀಶ್ ನನ್ನು ಪುಸಲಾಯಿಸಿ ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ತೀರಿಸುವುದಾಗಿ ಹೇಳಿ ಸುರೇಂದ್ರರ ಕೊಲೆಗೆ ಪ್ರರೇಪಿಸಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.

ಆರೋಪಿಗಳಾದ ದಿವ್ಯರಾಜ್, ಆರೋಪಿ ಅನಿಲ್ ಮೂಲಕ ಕೃತ್ಯಕ್ಕೆ ವಾಹನದ ವ್ಯವಸ್ಥೆ ಮಾಡಿದ್ದಲ್ಲದೆ ಕೃತ್ಯದ ಬಳಿಕ ಉಜಿರೆ ಪರಿಸರದಲ್ಲಿ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ವ್ಯವಸ್ಥೆ ಮಾಡಿದ್ದ. ತದನಂತರ ಆರೋಪಿಗಳು ಇಲ್ಲಿಂದ ತಪ್ಪಿಸಿಕೊಳ್ಳಲೂ ವಾಹನದ ವ್ಯವಸ್ಥೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಿವ್ಯರಾಜ್ 2017ರಲ್ಲಿ ನಡೆದ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ಕೊಲೆಗೀಡಾದ ಉಡುಪಿ ಕಿಶನ್ ಹೆಗ್ಡೆಯ ಆಪ್ತನಾಗಿದ್ದಾನೆ. ಆರೋಪಿ ಶರಣ್ ಮೇಲೆ ಕೊಲೆ, ಕೊಲೆಯತ್ನ, ಲೈಂಗಿಕ ದೌರ್ಜನ್ಯ ಸಹಿತ 20 ಪ್ರಕರಣ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಸದ್ಯ ಎರಡು ವರ್ಷಗಳಿಂದ ಬೆಂಗಳೂರು ಕಾರಾಗೃಹದಲ್ಲಿದ್ದ. ಕಾರಾಗೃಹದಿಂದಲೇ ಸುರೇಂದ್ರನ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಎಸ್ಪಿ ಲಕ್ಷೀಪ್ರಸಾದ್ ಪ್ರಕಟಣೆ ತಿಳಿಸಿದೆ.

ಹಣಕಾಸು ಮತ್ತು ವೈಯಕ್ತಿಕ ದ್ವೇಷದಿಂದ ಸುರೇಂದ್ರ ಹತ್ಯೆ ನಡೆಸಲಾಗಿದೆ ಎಂದು ತನಿಖೆಯಿಂದ ಬಯಲಿಗೆ ಬಂದಿದೆ. ಸದ್ಯ 9 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ಮುಂದುವರಿದೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ವೆಲಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಎಸ್ಸೈಗಳಾದ ಅವಿನಾಶ್ ಎಚ್. ಗೌಡ, ಪ್ರಸನ್ನ ಎಂ.ಎಸ್., ಸಂಜೀವ ಕೆ., ನಂದಕುಮಾರ್, ವಿನೋದ್ ರೆಡ್ಡಿ, ರಾಜೇಶ್ ಕೆ.ವಿ., ಕಲೈಮಾರ್, ಕುಮಾರ್ ಕಾಂಬ್ಳೆ , ಶ್ರೀ ರವಿ ಬಿ.ಎಸ್., ಡಿಸಿಐಬಿ ಪಿಐಯ ಚೆಲುವರಾಜ್ ಹಾಗೂ ಡಿಸಿಐಬಿ ಸಿಬ್ಬಂದಿ, ತಾಂತ್ರಿಕ ವಿಭಾಗದ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.


Spread the love