ಹಣ ಕೊಡದ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ

Spread the love

ಹಣ ಕೊಡದ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ

ಸಾಲಿಗ್ರಾಮ: ಕೃಷ್ಣರಾಜನಗರ ಪಟ್ಟಣದಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪಯಾತ್ರೆಗೆ ಆಗಮಿಸಿದವರಿಗೆ ಹಣ ನೀಡಲಿಲ್ಲ ಎಂದು ಆರೋಪಿಸಿ ಕೆಲವು ನಾಯಕರು ಹಾಗೂ ಕಾರ್ಯಕರ್ತರು ಹಣ ಹಂಚಿಕೆ ಜವಾಬ್ದಾರಿ ಹೊತ್ತಿದ್ದ ನಾಯಕರ ವಿರುದ್ದ ಧಿಕ್ಕಾರ ಕೂಗಿ ಅವಾಚ್ಯಶಬ್ದಗಳಿಂದ ನಿಂದಿಸಿ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಘಟನೆ ನಡೆದಿದೆ.

ಶುಕ್ರವಾರ ಬೆಳಿಗ್ಗೆ ರಾಜ್ಯನಾಯರೊಡಗೂಡಿದ ಸಂಕಲ್ಪಯಾತ್ರೆ ನಡೆದರೆ ಸಂಜೆ ವೇಳೆಗೆ ತಾಲೂಕು ನಾಯಕರು ಜನತೆಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಸಂಘರ್ಷ ಯಾತ್ರೆ ನಡೆದಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಪಟ್ಟಣದ ಮೈಸೂರು ರಸ್ತೆಯ ಖಾಸಗಿ ಸ್ಕೂಟರ್ ಶೋರೂಂ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಮತ್ತು ಕೆಲ ಮುಖಂಡರು ಬಂದ ಜನತೆಗೆ ಹಣ ನೀಡದೆ ಕದ್ದು ಹೋದ ನಾಯಕರು ಎಂದು ಏಕವಚನದಲ್ಲಿ ಅವಾಚ್ಯಶಬ್ದಗಳಿಂದ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ.ಮಂಜು, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆಶ್ರೀನಿವಾಸಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪ್ರಭಾಕರ ಜೈನ್ ಸೇರಿದಂತೆ ಇನ್ನಿತರ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಈ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರುವಂತೆ ನಮಗೆ ಹೇಳಿ ಈಗ ಹಣ ನೀಡದೆ ಹೋಗಿದ್ದಾರೆ. ಇದು ಪಕ್ಷದ ಮುಖಂಡರ ಲಕ್ಷಣವೇ ಎಂದು ಕೀಳುಮಟ್ಟದಲ್ಲಿ ಬೈಗುಳಗಳಿಂದ ನಿಂದಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಹಣ ಯಾರು ಕೊಡಬೇಕು ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ವ್ಯಕ್ತಿಯೊಬ್ಬನ ವಿರುದ್ದ ಒಟ್ಟಾಗಿ ಮುಗಿಬಿದ್ದ ಪ್ರತಿಭಟನಾಕಾರ ಕಾರ್ಯಕರ್ತರು ಹಲ್ಲೆಗೆ ಮುಂದಾದಾಗ ಕೆಲವರು ಕೂಡಲೇ ಸಮಾಧಾನಪಡಿಸಿ ತಿಳಿಗೊಳಿಸಿದ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಹಾದಿರಂಪ ಬೀದಿರಂಪ ಆಗುತ್ತಿದ್ದ ಸಂದರ್ಭದಲ್ಲಿ ಗಂಧನಹಳ್ಳಿ ಶಕ್ತಿಕೇಂದ್ರದ ಅಧ್ಯಕ್ಷ ಎನಿಸಿಕೊಂಡ ಜಿ.ಪ್ರಕಾಶ್ ಎಂಬುವರು ವೀಡಿಯೋ ಮಾಡಿ ನಮಗೆ 80ರಿಂದ 100 ಗಾಡಿಗಳನ್ನು ಕರೆದುಕೊಂಡು ಬನ್ನಿ ಎಂದರು ನಾವು 200 ಗಾಡಿಗಳನ್ನು ಕರೆದುಕೊಂಡು ಬಂದೆವು ಬಂದವರಿಗೆ ಹಣ ಇರಲಿ ಅನ್ನ ನೀರು ನೀಡದೇ ವಾಪಸ್ ಕಳುಹಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣ ಕೇಳಿದ್ದಕ್ಕೆ ಮಿರ್ಲೆಶ್ರೀನಿವಾಸಗೌಡ, ಮಂಜುನಾಥ್ ಹಣ ನೀಡಲಿಲ್ಲ ಆದರೆ ಹೊಸಹಳ್ಳಿವೆಂಕಟೇಶ್ ನಾನು 5 ಸಾವಿರ ಮಾತ್ರ ನೀಡುತ್ತೇನೆ ಎಂದರು, ಆಗ ನನ್ನೊಂದಿಗೆ ಆಗಮಿಸಿದವರು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಿ ಸ್ಕೂಟರ್ ಕಾರ್ ಮೇಲೆ ಕಲ್ಲು ತೂರಿ ಹಣ ನೀಡುವಂತೆ ಒತ್ತಾಯಿಸಿದರು. ಇದರಿಂದ ನಾನು ನನ್ನ ಮನೆಯ ಒಡವೆಯನ್ನು ಗಿರವಿ ಇಟ್ಟು ಜನತೆಗೆ ಹಣನೀಡಿದ್ದೇನೆ ಎಂದು ಪಕ್ಷದ ಮುಖಂಡರ ವಿರುದ್ಧ ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಇದು ಬಿಜೆಪಿ ಮುಖಂಡರು ತಲೆ ತಗ್ಗಿಸುವ ವಿಚಾರವಾಗಿದೆ.

ಒಟ್ಟಾರೆಯಾಗಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳು ಬಿಜೆಪಿ ನಾಯಕರ ನಿದ್ದೆಗೆಡಿಸುವಂತೆ ಮಾಡಿದ್ದಂತು ನಿಜ. ಸದ್ಯ ಈ ಘಟನೆ ತಾಲೂಕಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನಾಯಕರು ಇದಕ್ಕೆ ಹೇಗೆ ಅಂತ್ಯ ಹಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.


Spread the love

Leave a Reply

Please enter your comment!
Please enter your name here