ಹತ್ತು ನಿಮಿಷ ತಡವಾಗಿದ್ದರೂ ನಡೆದೇ ಬಿಡುತ್ತಿತ್ತು ಬಾಲ್ಯವಿವಾಹ!

Spread the love

ಹತ್ತು ನಿಮಿಷ ತಡವಾಗಿದ್ದರೂ ನಡೆದೇ ಬಿಡುತ್ತಿತ್ತು ಬಾಲ್ಯವಿವಾಹ!

ಕುಂದಾಪುರದಲ್ಲೊಂದು ಅಪರೂಪದ ಪ್ರಕರಣ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಕುಂದಾಪುರ: ಇಲ್ಲಿಗೆ ಸಮೀಪದ ಗಂಗೊಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಅಧಿಕಾರಿಗಳು ಮಧ್ಯದಲ್ಲೇ ತಡೆಹಿಡಿದ ಘಟನೆ ನಡೆದಿದೆ.

ಬಾಲ್ಯ ವಿವಾಹ ನಡೆಯುತ್ತಿರುವ ಖಚಿತ ದೂರಿನ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಢಾಯಿಸಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ. ಅಧಿಕಾರಿಗಳು ಬರುವ ಮುನ್ನವೇ ಮದುವೆ ಸಂಪ್ರದಾಯಗಳು ನಡೆದಿದ್ದು, ತಾಳಿ ಕಟ್ಟಲಷ್ಟೇ ಬಾಕಿಯಿತ್ತು. ಸೂಕ್ತ ಸಮಯದಲ್ಲಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದರಿಂದ ನಡೆಯಬೇಕಿದ್ದ ಬಾಲ್ಯ ವಿವಾಹ ಅರ್ಧದಲ್ಲೇ ಮುಕ್ತಾಯಗೊಂಡಿದೆ. ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಬಾಲ್ಯವಿವಾಹಕ್ಕೆ ಸಾಕ್ಷಿಯಾಗಬೇಕಿದ್ದ ಉಡುಪಿ ಜಿಲ್ಲೆಯ ಪ್ರಜಾÐವಂತ ಜನತೆ ನಿಟ್ಟುಸಿರುಬಿಟ್ಟಿದ್ದಾರೆ.

ತ್ರಾಸಿ ಸಮಿಪದ ಕಲ್ಯಾಣ ಮಂಟಪವೊಂದರಲ್ಲಿ ತಲ್ಲೂರು ಸಮೀಪದ 17 ವರ್ಷದ ಬಾಲಕಿಯ ಜೊತೆ 28 ವರ್ಷದ ಯುವಕನೊಂದಿಗೆ ಮದುವೆ ಮಾಡಲು ಕುಟುಂಬಸ್ಥರು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡಿದ್ದಲ್ಲದೇ ಸುಮಾರು 200 ಕ್ಕೂ ಹೆಚ್ಚು ಮಂದಿ ಮದುವೆ ಮಂಟಪದಲ್ಲಿ ಸೇರಿದ್ದರು. ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಪೆÇಲೀಸ್ ಇಲಾಖೆ ಗಂಗೊಳ್ಳಿ ಹಾಗೂ ತ್ರಾಸಿ ಗ್ರಾಮ ಪಂಚಾಯತ್ ಅಧಿಕಾರಿಗಳ ತಂಡ ಹಠಾತ್ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆತಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಕುಟುಂಬದ ಎರಡೂ ಕಡೆಯವರಿಗೂ ಬಾಲ್ಯವಿಹಾಹ ನಿಷೇದ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದ್ದಲ್ಲದೆ ಕುಟುಂಬಿಕರಿಂದ ಮತ್ತು ಕಲ್ಯಾಣ ಮಂಟಪದ ಮಾಲಿಕರು ಮತ್ತು ಪುರೋಹಿತರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಇನ್ನು ದೂರದೂರುಗಳಿಗೆ ಮದುವೆಗಾಗಿ ಬಂದಿದ್ದವರನ್ನು ವಾಪಸು ಕಳುಹಿಸಿ ಕೊಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ, ರಕ್ಷಣಾಧಿಕಾರಿ ಕಪಿಲ, ಸಮಾಜ ಕಾರ್ಯಕರ್ತೆ ಸುರಕ್ಷಾ, ಗಂಗೊಳ್ಳಿ ಸಹಾಯಕ ಉಪನಿರೀಕ್ಷಕ ರಘುರಾಮ, ಹೆಡ್ ಕಾನ್ಸ್ಟೇಬಲ್ ಮೋಹನ್ ಪೂಜಾರಿ, ಮಹಿಳಾ ಪೊಲೀಸ್ ಸಿಬ್ಬಂದಿ ರೂಪ, ತ್ರಾಸಿ ಗ್ರಾ.ಪಂ ಪಿಡಿಒ ಶೋಭಾ, ಸಿಬ್ಬಂದಿಗಳಾದ ಶಿವಾನಂದ, ಸಂದೀಪ್, ಅಂಗನವಾಡಿ ಕಾರ್ಯಕರ್ತೆ ಜಯಮಾಲಾ ಮೊದಲಾದವರಿದ್ದರು.

 


Spread the love