ಹತ್ತೇ ದಿನಗಳಲ್ಲಿ ಸಂತೇಕಟ್ಟೆ ಜಂಕ್ಷನ್ ಸಮಸ್ಯೆಗಳನ್ನು ಪರಿಹರಿಸುತ್ತೇವೆ – ಕಾನೂನು ಸೇವಾ ಪ್ರಾಧಿಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಶ್ವಾಸನೆ

Spread the love

ಹತ್ತೇ ದಿನಗಳಲ್ಲಿ ಸಂತೇಕಟ್ಟೆ ಜಂಕ್ಷನ್ ಸಮಸ್ಯೆಗಳನ್ನು ಪರಿಹರಿಸುತ್ತೇವೆ – ಕಾನೂನು ಸೇವಾ ಪ್ರಾಧಿಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಶ್ವಾಸನೆ

ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ, ವಾಹನ ಚಾಲಕರಿಗೆ, ರಸ್ತೆ ದಾಟುವ ಪಾದಾಚಾರಿಗಳಿಗೆ ಸಿಂಹಸ್ವಪ್ನವಾಗಿರುವ ಕಲ್ಯಾಣಪುರ-ಸಂತೇಕಟ್ಟೆ ಜಂಕ್ಷನ್‍ನ 90 ಶೇಕಡಾ ಸಮಸ್ಯೆಗಳನ್ನು ಹತ್ತೇ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಇಂಜನಿಯರ್ ಸುರೇಶ ಹಾಗೂ ಹೆದ್ದಾರಿಯ ಉಸ್ತುವಾರಿಯನ್ನು ವಹಿಸಿರುವ ನವಯುಗ ಎಂಟರ್ ಪ್ರೈಸಸ್‍ನ ಪ್ರತಿನಿಧಿ ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ.

ಅವೈಜ್ಞಾನಿಕವಾಗಿ ರಚಿತವಾಗಿರುವ ಕಲ್ಯಾಣಪುರ-ಸಂತೇಕಟ್ಟೆ ಜಂಕ್ಷನ್‍ನಲ್ಲಿ ದಿನನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಹಸ್ರಾರು ನಾಗರೀಕರ ಪರವಾಗಿ ಸಲ್ಲಿಸಲಾಗಿದ್ದ ದೂರನ್ನು ಅನುಸರಿಸಿ ಕರೆಯಲಾಗಿದ್ದ ಈ ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ  ಸುಬ್ರಮಣ್ಯ ಜೆ.ಎನ್ ವಹಿಸಿದ್ದರು.

ಪ್ರಾರಂಭದಲ್ಲಿ ಸಮಸ್ಯೆಯ ಸಂಪೂರ್ಣ ಚಿತ್ರಣವನ್ನು ಸ್ಲೈಡ್ ಹಾಗೂ ವಿಡಿಯೋ ತುಣುಕುಗಳ ಮೂಲಕ ವಿವರಿಸಿದ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಅವರು ಸ್ಥಳೀಯ ನಾಗರೀಕರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಹೆದ್ದಾರಿಗಳಿರಬೇಕಲ್ಲದೇ ದೋಷಪೂರಿತವಾಗಿರಬಾರದು ಎಂದರು. ಈಗಾಗಲೇ ರಚಿತವಾಗಿರುವ ಉಡುಪಿ-ಮಲ್ಪೆಯ ಕರಾವಳಿ ಜಂಕ್ಷನ್ನಿನ ಮೇಲ್‍ ಸೇತುವೆಯಿಂದಾಗಿ ಪಾದಾಚಾರಿಗಳು ಕಷ್ಟಪಡುತ್ತಿದ್ದಾರೆ ಎಂಬುದನ್ನು ಬೆಟ್ಟು ಮಾಡಿದರು.

ಈ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಸಹಾಯಕ ಆಯುಕ್ತ ಕೆ.ರಾಜುರವರು ಈ ಸಮಸ್ಯೆಗಳನ್ನು ಈಗಾಗಲೇ ಹಲವಾರು ಸಭೆಗಳಲ್ಲಿ ಚರ್ಚಿಸಲಾಗಿದ್ದು ಪ್ರತಿ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಆಶ್ವಾಸನೆಗಳು ಸಿಗುತ್ತವೆಯೇ ವಿನಹ ಸಮಸ್ಯೆಗಳೆಲ್ಲಾ ಹಾಗೆಯೇ ಉಳಿದಿವೆ ಎಂದರು. ಹೆದ್ದಾರಿಯ ವಿನ್ಯಾಸವನ್ನು ಬದಲಾಯಿಸದೇ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ, ಪ್ರತಿದಿನವೆಂಬಂತೆ ಅಪಘಾತಗಳಾಗುತ್ತಿವೆ ಎಂದರು

ಟ್ರಾಫಿಕ್ ಪೋಲೀಸ್‍ರಿಂದಲೂ ನಿಭಾಯಿಸಲು ಅಸಾಧ್ಯವಾದ ಪರಿಸ್ಥಿತಿ ಇದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ  ಕುಮಾರ್ ಚಂದ್ರ ಅಲ್ಲಿರುವ ಬಸ್ ನಿಲ್ದಾಣಗಳನ್ನು ಸೂಕ್ತ ಪ್ರದೇಶಗಳಿಗೆ ವರ್ಗಾಯಿಸಲು ಸಲಹೆ ನೀಡಿದರು.

ಸ್ಥಳೀಯ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವರವರು ವಿಧ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿ ಮಕ್ಕಳನ್ನು ವಿದ್ಯಾಲಯಗಳಿಗೆ ಕಳುಹಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ ಎಂದರು.

ನಾಗರೀಕರ ಪರವಾಗಿ ಜೋಸೆಫ್ ಜಿ ಎಂ ರೆಬೆಲ್ಲೊ, ಐವನ್ ಮಸ್ಕರೇನಸ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್‍ನಾಯ್ಕ, ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಶೇಕರ ಬೈಕಾಡಿ, ಬಾಪ್ಟಿಸ್ಟ್ ಡಯಾಸ್, ಹರೀಶ್ ಕುಮಾರ್, ಅರುಣ್ ಸನಿಲ್ ಹಾಗೂ ಸುಜೀತ್‍ರವರು ಚರ್ಚೆಯಲ್ಲಿ ಭಾಗವಹಿಸಿದರು.

ಸಭೆಯ ಆರಂಭದಲ್ಲಿ ಉಡುಪಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಶ್ರೀಮತಿ ಶರ್ಮಿಳಾ ಎಸ್ ಸ್ವಾಗತಿಸಿದರು. ಉಡುಪಿ ನಗರ ಸಭೆಯ ಪೌರಾಯುಕ್ತ ಶ್ರೀ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


Spread the love