ಹನಗೋಡಿನಲ್ಲಿ ಲಕ್ಷ್ಮಣತೀರ್ಥದ ಜಲವೈಭವ

Spread the love

ಹನಗೋಡಿನಲ್ಲಿ ಲಕ್ಷ್ಮಣತೀರ್ಥದ ಜಲವೈಭವ

ಮೈಸೂರು: ದಕ್ಷಿಣ ಕೊಡಗಿನಲ್ಲಿ ಮಳೆಯಾಗಿ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದಾಗಲೆಲ್ಲ ಹುಣಸೂರು ತಾಲೂಕಿನ ಹನಗೋಡುನಲ್ಲಿರುವ ಅಣೆಕಟ್ಟೆಯಲ್ಲಿ ಜಲವೈಭವ ಕಣ್ಣಿಗೆ ರಾಚುತ್ತದೆ.

ಧುಮ್ಮಿಕ್ಕಿ ಹರಿಯುವ ಲಕ್ಷ್ಮಣ ತೀರ್ಥ ನದಿ ಹನಗೋಡುನಲ್ಲಿರುವ ಅಣೆಕಟ್ಟೆ ತುಂಬಿ ಹರಿದಾಗ ಏರ್ಪಡುವ ಸುಂದರ ದೃಶ್ಯವನ್ನು ನೋಡುವುದೇ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ. ಈಗಾಗಲೇ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದ್ದು, ಏರು ತಗ್ಗುಗಳಲ್ಲಿ ನೀರು ಹರಿದು ಬರುವಾಗ ಅದನ್ನು ನೋಡುವುದೇ ಮಜಾ ಎನಿಸುತ್ತದೆ.

ಕಳೆದ ನಾಲ್ಕು ವರ್ಷಗಳ ನಂತರ ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ನದಿಯಲ್ಲಿ ಪ್ರವಾಹ ಕಂಡು ಬರುತ್ತಿದ್ದು, ಇದು ರೈತರಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದು, ಅದರಲ್ಲೂ ಹನಗೋಡು ಅಣೆಕಟ್ಟೆ ಮೇಲೆ ಹರಿಯುವಾಗ ಕಂಡು ಬರುತ್ತಿರುವ ದೃಶ್ಯವಂತು ಕಣ್ಣಿಗೆ ಕಟ್ಟುತ್ತಿದೆ. ಈ ದೃಶ್ಯವನ್ನು ನೋಡಲೆಂದೇ ಸ್ಥಳೀಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಜತೆಗೆ ನೀರಿನ ಸುಂದರ ದೃಶ್ಯವನ್ನು ಸೆರೆಹಿಡಿಯುವುದು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.

ಲಕ್ಷ್ಮಣತೀರ್ಥ ನದಿಗೆ ಹನಗೋಡಿನಲ್ಲಿ ಪುಟ್ಟದಾದ ಅಣೆಕಟ್ಟೆ ಕಟ್ಟಿರುವುದರಿಂದ ರೈತರಿಗೆ ಅನುಕೂಲವಾಗಿದೆಯಲ್ಲದೆ ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲೂಕಿನ 40 ಕೆರೆಗಳಿಗೂ ಇದರ ನೀರು ಹರಿಯುತ್ತಿದೆ. ಇದಕ್ಕೆ ಹನುಮಂತಪುರ ಹಾಗೂ ಉದ್ದೂರು ಮುಖ್ಯ ನಾಲೆಗಳನ್ನು ನಿರ್ಮಿಸುವ ಮೂಲಕ ರೈತರ ಜಮೀನಿಗೆ ನೀರನ್ನು ಹಾಯಿಸಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಕೆಲವು ವರ್ಷಗಳಿಂದ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯದ ಕಾರಣ ಜನರು ಸುಂದರ ದೃಶ್ಯವನ್ನು ಕಳೆದು ಕೊಂಡಿದ್ದರಾದರೂ ಈ ಬಾರಿ ನೋಡುಗರಿಗೆ ಜಲವೈಭವ ದೊರೆಯುತ್ತಿದ್ದು ಜನ ಮಾತ್ರವಲ್ಲದೆ ರೈತರು ಖುಷಿಯಾಗಿದ್ದಾರೆ.


Spread the love