ಹರೀಶ್ ಬಂಗೇರ ಬಂಧನದಿಂದ ಬಿಡುಗಡೆ? ನಮಗಿನ್ನು ಯಾವುದೇ ಅಧಿಕೃತ ಸುದ್ದಿ ಬಂದಿಲ್ಲ: ಪತ್ನಿ ಸುಮನಾ

Spread the love

ಹರೀಶ್ ಬಂಗೇರ ಬಂಧನದಿಂದ ಬಿಡುಗಡೆ? ನಮಗಿನ್ನು ಯಾವುದೇ ಅಧಿಕೃತ ಸುದ್ದಿ ಬಂದಿಲ್ಲ: ಪತ್ನಿ ಸುಮನಾ

ಕುಂದಾಪುರ: ಫೇಸ್‌ಬುಕ್‌ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ ಆರೋಪದಡಿಯಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಇಲ್ಲಿನ ಕೋಟೇಶ್ವರ ನಿವಾಸಿ ಹರೀಶ್ ಬಂಗೇರ ಒಂದು ವರ್ಷ ಏಳು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಬರುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಶೀಘ್ರದಲ್ಲಿ ತಾಯ್ನಾಡಿಗೆ ಮರಳಲಿರುವ ಅವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದ್ದು ಅವರು ಭಾರತ ಪ್ರಯಾಣದ ಸಿದ್ದತೆಯ ಕೊನೆಯ ಹಂತದಲ್ಲಿ ಇದ್ದಾರೆ ಎನ್ನುವ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್‌ ಬಂಗೇರ ಅವರ ಹೆಸರಲ್ಲಿ ಫೇಸ್‌ ಬುಕ್‌ನಲ್ಲಿ ನಕಲಿ ಖಾತೆ ತೆರೆದು, ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಮಾಡಿದವರು ಬಂಗೇರ ಎಂದೇ ಭಾವಿಸಿದ್ದ ಸೌದಿ ಪೊಲೀಸರು ಬಂಗೇರ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಈ ವೇಳೆ ಬಂಗೇರ ಪತ್ನಿ ಸುಮನ ಮಾಧ್ಯಮಗಳಿಗೆ‌ ಮಾಹಿತಿ‌ ನೀಡಿ ತನ್ನ ಪತಿಯನ್ನು ಷಡ್ಯಂತ್ರ ಮಾಡಿ ಈ‌ ಪ್ರಕರಣದಲ್ಲಿ‌ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದರಲ್ಲದೆ ನಿರಪರಾಧಿಯಾದ ಪತಿಯ ಬಿಡುಗಡೆಗೆ ಸಹಕರಿಸುವಂತೆ ಕಣ್ಣೀರಿಟ್ಟಿದ್ದರು.

ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಅನಗತ್ಯ ಫೋಸ್ಟ್ ಮಾಡಿರುವ ಕುರಿತು ತನಿಖೆ ನಡೆಸುವಂತೆ ಅವರ ಪತ್ನಿ ನೀಡಿರುವ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದರೆಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಪ್ರಕರಣದ ವಿಚಾರಣೆಯಲ್ಲಿ ಹರೀಶ್ ಬಂಗೇರ ಅವರ ನಕಲಿ ಖಾತೆ ತೆರೆದಿರುವ ಹಾಗೂ ಈ ಖಾತೆಗೂ ಬಂಗೇರ ಅವರಿಗೂ ಸಂಬಂಧ ಇಲ್ಲದೆ ಇರುವ ಅಂಶಗಳು ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕಂಡು ಬಂದಿದ್ದ ಅಂಶಗಳನ್ನು ರಾಯಭಾರಿ ಕಚೇರಿ ಮೂಲಕ ಸೌದಿ ಅರೇಬಿಯಾ ಸರ್ಕಾರಕ್ಕೂ ತಲುಪಿಸಲಾಗಿತ್ತು. ಈ ತನಿಖಾ ಅಂಶಗಳೇ ಬಂಗೇರ ಅವರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.

ಈ ಪ್ರಕರಣದ ಕುರಿತು ಅವರ ಕುಟುಂಬ ಸ್ನೇಹಿತ ಲೋಕೇಶ್ ಅಂಕದಕಟ್ಟೆ ಸಮಾನಮನಸ್ಕರೊಂದಿಗೆ ಬಿಡುಗಡೆಯ ಬಗ್ಗೆ ನಿರಂತರ ಪ್ರಯತ್ನವನ್ನು ಸಂಘಟಿಸಿದ್ದರು. ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರ‌ನಾಥ್ ಶ್ಯಾನುಭಾಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ‌ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ‌ ಶ್ರೀನಿವಾಸ್‌ ಶೆಟ್ಟಿ‌ , ಹಿರಿಯ ಪೊಲೀಸ್ ಅಧಿಕಾರಿ ಕಮಲಪಂತ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹರೀಶ್ ಬಂಗೇರ ಬಿಡುಗಡೆಯ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಹರೀಶ್ ಬಂಗೇರ ಅವರ ಪತ್ನಿ ಸುಮನಾ ಅವರು, ಪತಿಯ ಬಿಡುಗಡೆಯ ಸುದ್ದಿಯನ್ನು ನಿರಾಕರಿಸಿದ್ದಾರೆ. ತಮಗೆ ಈವರೆಗೂ ಯಾವುದೇ ಅಧಿಕೃತ ಸುದ್ದಿ ಸಿಕ್ಕಿಲ್ಲ. ತನ್ನ‌ ಪತಿಯ ಬಿಡುಗಡೆಗೆ ಅನೇಕರು ಪ್ರಯತ್ನ ಪಟ್ಟಿದ್ದಾರೆ. ಅವರು ಯಾರು ಈವರೆಗೂ ಬಿಡುಗಡೆಯ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲಿ ಬರುತ್ತಿರುವ ಸುದ್ದಿ ನೋಡಿ‌ ಕುಟುಂಬಿಕರು ಹಾಗೂ ಹಿತೈಷಿಗಳು ಕರೆ ಮಾಡಿ ವಿಚಾರಿಸುತ್ತಿದ್ದಾರೆ ಎಂದಿದ್ದಾರೆ.


Spread the love