ಹಳ್ಳಿಯ ಜೀವನ ಸೊಗಸು

Spread the love

ಹಳ್ಳಿಯ ಜೀವನ ಸೊಗಸು

ಹಳ್ಳಿಯ ಜೀವನವೆಂದರೆ ಪ್ರಕೃತಿದತ್ತವಾದ ಸೂರ್ಯನ ಬೆಳಕು, ವಾಯು,ನೆಲ, ಜಲಗಳನ್ನು ತನ್ನ ಯೋಚನೆಗಳ ಯೋಜನೆಗಳಿಗೆ ತಕ್ಕಂತೆ ಬಳಸಿ ಜೀವನ ನಡೆಸುವುದು.ಇಲ್ಲಿ ಪರಿಶುದ್ಧವಾದ ಗಾಳಿ, ಯಥೇಚ್ಛವಾಗಿ ನೀರು ಹಾಗೂ ಕೃಷಿಗೆ ತಕ್ಕುದಾದ ನೆಲ ಪರಿಪೂರ್ಣವಾಗಿ ಬಳಸಲ್ಪಡುತ್ತದೆ.ಕೃಷಿಕ ಅಥವಾ ರೈತನ ಬದುಕು ಹಾಗೂ ಸಂಪಾದನೆ ಸಂಪೂರ್ಣವಾಗಿ ಪ್ರಕೃತಿ ನಿಯಮಕ್ಕೆ ಬದ್ಧವಾಗಿರುತ್ತದೆ.ಪರಿಶುದ್ಧ ಗಾಳಿ ಹಾಗೂ ಕಲುಷಿತ ಮುಕ್ತ ವಾತಾವರಣ.ಹೈವೇಯಿಂದ ಒಂದೆರಡು ಕಿಲೋಮೀಟರ್ ಒಳಗೆ ಹಳ್ಳಿಗಳರುವುದರಿಂದ ವಾಹನಗಳು ಓಡಾಟವು ತುಂಬಾ ಕಡಿಮೆ ಇರುತ್ತದೆ.ಒತ್ತಡ ಮುಕ್ತ ಯೋಚನೆಗಳಿಂದ ಆರೋಗ್ಯಕರ ಜೀವನ ಶೈಲಿ ಒಲಿಯುತ್ತದೆ.

ಬೆಳಿಗ್ಗೆ ಎದ್ದಾಗ ಕೇಳುವ ಕೋಳಿಯ ಕೂಗಿನ ಸುಪ್ರಭಾತದಿಂದ ಹಿಡಿದು ರಾತ್ರಿ ಮಲಗುವವರೆಗೂ ಹಳ್ಳಿಯ ಬದುಕಿನಲ್ಲಿ ಎಲ್ಲಾ ಕೆಲಸಗಳೂ ಸುತ್ತಲಿನ ಪರಿಸರಕ್ಕೆ ಅವಲಂಬಿಸಿರುತ್ತದೆ.ಹಲ್ಲುಜ್ಜಲು ಮಾವಿನ ಎಲೆ,ಚಪ್ಪಲಿಗಳಿಲ್ಲದ ಬರಿಗಾಲಿನ ಪಯಣ ಸೌದೆ ಕೊಳ್ಳಿಗಳನ್ನು ಸಂಗ್ರಹಿಸಿ ಬೆಂಕಿ ಹಾಕಿ ಹಂಡೆ ತುಂಬಾ ಬಿಸಿನೀರು ಕಾಯಿಸಿ ಮಾಡುವ ಜಳಕ,ಬಾಳೆ ಎಲೆಯಲ್ಲಿ ಒತ್ತಿ ಕೆಂಡದಲ್ಲಿ ಸುಟ್ಟ ರೊಟ್ಟಿ ,ನಿಮ್ಮ ತೋಟದಲ್ಲಿ ಬೆಳೆದಿರುವ ತೆಂಗಿನ ತುರಿಗೆ ಗಾಂಧಾರಿ ಮೆಣಸು ಬೆರೆಸಿ ಒರಳು ಕಲ್ಲಿನಲ್ಲಿ ಅರೆದು ಚಟ್ನಿ, ಹಬ್ಬ ಹರಿದಿನಗಳು, ಬಾಳೆಎಲೆಯ ಔತಣ ಆಹಾ.. ಆ ಸವಿ ಸ್ವರ್ಗಕ್ಕೂ ನಿಲುಕದು.

ಗದ್ದೆ, ತೋಟಗಳಲ್ಲಿ ಮೈ ಬಗ್ಗಿಸಿ ದುಡಿದು ಬೆವರು ಹರಿಸಿ ಕೆಸರು ಮೆತ್ತಿಸಿಕೊಂಡಾಗ ಆರೋಗ್ಯವೂ ಸುಧಾರಿಸುತ್ತದೆ.ಹಳ್ಳಿಯಲ್ಲಿ ಗಂಡ, ಹೆಂಡತಿ,ಮಕ್ಕಳು ಜೊತೆಯಲ್ಲಿ ದುಡಿಯುವ,ಕಳೆಯುವ ಅವಕಾಶ ಹೆಚ್ಚು ಶಿಕ್ಷಣದ ಕೊರತೆ ಇದ್ದರೂ ಮಾನವೀಯತೆ ಮೌಲ್ಯಗಳು,ಪರಸ್ಪರ ಸಹಕಾರ, ಸಮಾರಂಭಗಳಲ್ಲಿ ಒಟ್ಟು ಸೇರಿವಿಕೆ ಹಳ್ಳಿ ಜೀವನದಲ್ಲಿ ಹೆಚ್ಚು ಹಾಗೂ ಕುಟುಂಬ ಬಾಂಧವ್ಯ ಹೆಚ್ಚಲು ಸಹಕಾರಿ.ಹಳ್ಳಿಯ ಜೀವನ ಎಷ್ಟು ಒಳ್ಳೆಯದೋ ಅಲ್ಲಿನ ಜನರೂ ಅಷ್ಟೇ ಒಳ್ಳೆಯವರು, ನಾವು ನೌಕರಿಯನ್ನರಸಿ ಪಟ್ಟಣ ಸೇರಿದರೂ ನಮ್ಮ ಮೂಲ ಸ್ಥಾನವಾದ ಹಳ್ಳಿಯನ್ನು ಮರೆಯಬಾರದು.

ಅನುಷಾ ಪಿ. ಜೆ
ದ್ವಿತೀಯ ಬಿ. ಎಡ್
ಸಂತ ಅಲೋಷಿಯಸ್ ಶಿಕ್ಷಣ ತರಬೇತಿ ಸಂಸ್ಥೆ ಮಂಗಳೂರು


Spread the love