ಹಾನಿಗೊಳಗಾದ ದೋಣಿಗಳಿಗೆ ಹೆಚ್ಚಿನ ಪರಿಹಾರ, ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ – ಸಚಿವ ಅಂಗಾರ

Spread the love

ಹಾನಿಗೊಳಗಾದ ದೋಣಿಗಳಿಗೆ ಹೆಚ್ಚಿನ ಪರಿಹಾರ, ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ – ಸಚಿವ ಅಂಗಾರ

ಕುಂದಾಪುರ: ನೆರೆಹಾವಳಿಯಿಂದಾಗಿ ಹಾನಿಗೊಳಗಾದ ದೋಣಿಗಳಿಗೆ ಹೆಚ್ಚಿನ ಪರಿಹಾರ ನೀಡುವಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.

ಅವರು ಬುಧವಾರ ಇತ್ತೀಚೆಗೆ ನೆರೆಹಾವಳಿಯಿಂದಾಗಿ ಹಾನಿಗೊಳಗಾದ ನಾಡ ದೋಣಿಗಳ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇತ್ತೀಚಿನ ವಿಪರೀತ ಮಳೆಯಿಂದಾಗಿ ಶಿರೂರು ಭಾಗದಲ್ಲಿ ಸುಮಾರು 48ಕ್ಜೂ ಹೆಚ್ಚು ನಾಡದೋಣಿಗಳು ಹಾನಿಗೊಳಗಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಹಾನಿಯ ಬಗ್ಗೆ ಈಗಾಗಲೇ ನಾನು ಅಧಿಕಾರಿಕಾರಿಗಳಿಂದ ಮಾಹಿತಿ ಪಡೆದು ಕೊಂಡಿರುತ್ತೇನೆ. ನನ್ನ ಸ್ವ ಕ್ಷೇತ್ರದ ಸುಳ್ಯದ ತಾಲೂಕುಗಳಲ್ಲಿ ಮಳೆ ಹಾನಿಯಿಂದ ವಿವಿಧ ಕಡೆಗಳಲ್ಲಿ ಹಾನಿಗಳು ಉಂಟಾಗಿದ್ದು, ಇದರಿಂದ ಶಿರೂರಿಗೆ ಬರಲು ವಿಳಂಬವಾಗಿದೆ. ಪ್ರಾಕೃತಿಕ ವಿಕೋಪ ನಿಯಮದಡಿ ಹಾನಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲದ ಕಾರಣ 12 ರಂದು ಕ್ಯಾಬಿನೆಟ್ ಸಭೆ ಇದ್ದು ಹಾನಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಮತ್ತು ಗರಿಷ್ಠ ಮೊತ್ತದ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ ನಾಡದೋಣಿಗಳ ಬೆಲೆ, ಅದರಲ್ಲಿ ಉಪಯೋಗಿಸುವ ಬಲೆ ಹಾಗೂ ಯಂತ್ರಗಳ ಖರ್ಚು ಏನು ಎನ್ನುವುದರ ಕುರಿತು ಸವಿಸ್ತಾರವಾಗಿ ಮಾಹಿತಿ ಪಡೆಯಲಾಗುವುದು.

ಸೀಮೆ ಎಣ್ಣೆ ನಿಷೇಧ ಸಮಸ್ಯೆ ಕುರಿತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ಅಲ್ಲದೆ ನಾಡ ದೋಣಿಗಳ ಸಮಸ್ಯೆಗಳ ಕುರಿತು ಯಾವುದೇ ರೀತಿಯ ಸಮಸ್ಯೆಯಾಗದಂತೆ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.

ಇತ್ತೀಚೆಗೆ ಕೇಂದ್ರ ಬಂದರು ಮತ್ತು ಮೀನುಗಾರಿಕೆ ಸಚಿವರನ್ನು ಭೇಟಿ ಮಾಡಿ ಮೀನುಗಾರರ ಹಲವಾರು ಬೇಡಿಕೆಗಳನ್ನು ಮನವಿ ಮೂಲಕ ಸಲ್ಲಿಸಿದ್ದೇನೆ. ನಮ್ಮ ಬೇಡಿಕೆಗಳಲ್ಲಿ ಈಗಾಗಲೇ 9ಕ್ಕೆ ಸಚಿವರ ಮಂಜೂರಾತಿಯನ್ನು ನೀಡಿರುತ್ತಾರೆ. ಮೀನುಗಾರರಿಗೆ ತೊಂದರೆಯಾಗದಂತೆ ಸರಕಾರ ಪ್ರತಿಯೊಂದು ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ. ಮೀನುಗಾರರು ಕೂಡ ತಮ್ಮ ಸ್ವ ಪ್ರತಿಷ್ಠೆಯನ್ನು ಬದಿಗಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕಾಗುತ್ತದೆ. ಡ್ರಜ್ಜಿಂಗ್, ಜೆಟ್ಟಿ ಇನ್ನಿತರ ಯೋಜನೆಗಳು ಮಂಜೂರಾತಿ ನೀಡಿದ್ದು ಅದಕ್ಕೆ ಸಹಕಾರ ನೀಡಬೇಕು ಎಂದರು.

ಈ ವೇಳೆ ಸಚಿವರ ಜೊತೆ ಬೈಂದೂರು ಶಾಸಕ ಬಿ ಎಮ್ ಸುಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೀನುಗಾರಿಕಾ ಮುಖಂಡ ಆನಂದ ಖಾರ್ವಿ ಉಪವಿಭಾಗಾಧಿಕಾರಿ ಕೆ‌. ರಾಜು ತಹಸೀಲ್ದಾರ್ ಕಿರಣ್ ಗೌರಯ್ಯ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಮಾಜಿ ತಾ.ಪಂ ಸದಸ್ಯರಾದ ಉಮೇಶ್ ಕಲ್ಗದ್ದೆ, ಪುಷ್ಪರಾಜ್ ಶೆಟ್ಟಿ, ಮೀನುಗಾರ ಮುಖಂಡ ವೆಂಕಟರಮಣ ಖಾರ್ವಿ, ಹಾಗೂ ಇತರರು ಉಪಸ್ಥಿತರಿದ್ದರು.


Spread the love