ಹಾರಂಗಿ ಜಲಾಶಯದಿಂದ ಆರು ಸಾವಿರ ಕ್ಯುಸೆಕ್ ನೀರು ನದಿಗೆ

Spread the love

ಹಾರಂಗಿ ಜಲಾಶಯದಿಂದ ಆರು ಸಾವಿರ ಕ್ಯುಸೆಕ್ ನೀರು ನದಿಗೆ

ಮಡಿಕೇರಿ: ಕೊಡಗಿನಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಒಂದಷ್ಟು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಕೆಲವು ದಿನಗಳಿಂದ ಲಯ ಪಡೆಯುವುದರೊಂದಿಗೆ ಧಾರಾಕಾರವಾಗಿ ಸುರಿಯುತ್ತಿದ್ದು ಇದರಿಂದ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯ ಭರ್ತಿಯಾದ ಕಾರಣ ಬುಧವಾರ ಸಂಜೆ ಜಲಾಶಯದಿಂದ ಸುಮಾರು ಆರು ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಶಾಸಕ ಅಪ್ಪಚ್ಚು ರಂಜನ್ ಅವರ ಸೂಚನೆ ಮೇರೆಗೆ ಸದ್ಯ ಹಾರಂಗಿ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್ ಗಳ ಮೂಲಕ‌ ನಾಲ್ಕು ಸಾವಿರ ಕ್ಯುಸೆಕ್ ಹಾಗೂ ವಿದ್ಯುತ್ ಉತ್ಪಾದನಾ ಘಟಕ‌ ಮೂಲಕ 2000 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ,

ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಹಟ್ಟಿಹೊಳೆ, ಕೂಟುಹೊಳೆ, ಹಾರಂಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, 19000 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಇದೀಗ 2859 ಅಡಿಗಳ‌ ಜಲಾಶಯದಲ್ಲಿ 2853 ಅಡಿಯಷ್ಟು ನೀರು ತುಂಬಿದೆ. ಮಳೆಯ ಅಬ್ಬರ ಹೆಚ್ಚಾದರೆ ಜಲಾಶಯದಿಂದ ಇನ್ನಷ್ಟು ನೀರನ್ನು ಹೊರಬಿಡುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.


Spread the love