
ಹಾಲಾಡಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಹಿಂದೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಬಿಜೆಪಿಗೆ ಅವಕಾಶ – ಅಭಿಮಾನಿ ಬಳಗ
ಉಡುಪಿ: ಐದು ಬಾರಿ ಶಾಸಕರಾಗಿ ರಾಜಕೀಯದಲ್ಲಿ ಪ್ರಾಮಾಣಿಕವಾಗಿದ್ದು ಕೊಂಡು ಕುಂದಾಪುರದಲ್ಲಿ ಬಿಜೆಪಿ ಬಾವುಟ ಹಾರಿಸಲು ಕಾರಣರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡುವಂತೆ ಅವರ ಅಭಿಮಾನಿ ಬಳಗ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರನ್ನು ಒತ್ತಾಯಿಸಿದೆ.
ಈ ಬಗ್ಗೆ ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲಾಡಿ ಅಭಿಮಾನಿ ಬಳಗದ ಸುಶಾಂತ್ ಅಚ್ಲಾಡಿ 1999 ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಸೋಲಿಸುವುದರ ಮೂಲಕ ಕುಂದಾಪುರದಲ್ಲಿ ಬಿಜೆಪಿ ಪಕ್ಷದ ಧ್ವಜ ಅರಳಲು ಕಾರಣರಾದವರು ಹಾಲಾಡಿ ಶ್ರೀನಿವಾಸ ಶೆಟ್ಟಿಯವರು. ಪ್ರತಿ ಬಾರಿಯ ಚುನಾವಣೆಯಲ್ಲಿ ಮತಗಳ ಅಂತರ ದುಪ್ಪಟ್ಟುಆಗುತ್ತಿರುವುದು ಅವರ ಸೇವಾ ಮನೋಭಾವ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.
ಪ್ರಬಲ ಸಮುದಾಯದ ಶಾಸಕರಾದರೂ ಕೂಡ ಎಂದಿಗೂ ಕೂಡ ಜಾತಿ ರಾಜಕೀಯ ಮಾಡದೆ, ಸಚಿವ ಸ್ಥಾನಕ್ಕಾಗಿ ಯಾವುದೇ ರೀತಿಯ ಲಾಬಿ ಅವರು ಮಾಡಿಲ್ಲ. ಸಚಿವ ಸ್ಥಾನ ಸಿಗಬೇಕು ಎಂದು ಯಾರ ಕಾಲಿಗೂ ಬಿದ್ದವರಲ್ಲ ತಾನಾಯಿತು ತನ್ನ ಜನ ಸೇವೆಯಾಯಿತು ಎಂದು ಮೌನವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಒಮ್ಮೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೊನೆಯ ಕ್ಷಣದಲ್ಲಿ ಅವರಿಗೆ ಕೈ ತಪ್ಪಿತ್ತು. ಈ ಹಿಂದೆ ಮಾಡಿದ ತಪ್ಪನ್ನು ಈ ಬಾರಿ ತಿದ್ದಿಕೊಳ್ಳಲು ಬಿಜೆಪಿಗೆ ಒಂದು ಅವಕಾಶವಿದ್ದು, ಹಾಲಾಡಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಹಾಲಾಡಿಯವರು ಒಮ್ಮೆಯಾದರೂ ಸಚಿವರಾಗಬೇಕು ಎನ್ನುವುದು ಅವರ ಲಕ್ಷಾಂತರ ಅಭಿಮಾನಿಗಳ ಆಸೆಯಾಗಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯೋಗಿಶ್, ಕೀರ್ತೀಶ್ ಪೂಜಾರಿ ಕೋಟ, ತೀರ್ಥನ್ ದೇವಾಡಿಗ ಉಪಸ್ಥಿತರಿದ್ದರು.
ಹಾಲಾಡಿ ಶ್ರೀನಿವಾಸ್ ಶೆಟ್ಟರಿಗೆ ಈ ಬಾರಿ ಸಚಿವ ಸ್ಥಾನ ಕೊಡದಿದ್ದರೆ ಇನ್ನು ನಾನಂತು ಬಿಜೆಪಿ ಗೆ ವೋಟ್ ಹಾಕಲ್ಲ ಹಾಗೆ ಬಿಜೆಪಿ ವಿರೋಧಿ ಆಗ್ತೇನೆ