
ಹಾಲಾಡಿಯವರನ್ನು ಪಕ್ಷ ಮುಂದೆ ಗುರುತಿಸಲಿದೆ, ನನ್ನ ಕೆಲಸಕ್ಕೆ ಅವರ ಬೆಂಬಲ ಬೇಕು – ಸಚಿವ ವಿ ಸುನೀಲ್ ಕುಮಾರ್
ಉಡುಪಿ: ಹಾಲಾಡಿಯವರಿಗೆ ಈಗಾಗಲೇ ಪಕ್ಷ ಗೌರವ ಕೊಟ್ಟಿದೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಬೆಂಬಲ ಬೇಕು ಎಂದು ನೂತನ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ.
ಸಚಿವರಾಗಿ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ ಪಕ್ಷ ಹಾಲಾಡಿಯನ್ನು ಕರೆದು ಮಾತನಾಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ಹಿರಿಯರಾದ ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಎಂದರು.
ಸಚಿವನಾಗಿ ಜಿಲ್ಲೆಗೆ ಮೊದಲಬಾರಿಗೆ ಆಗಮಿಸುತ್ತಿದ್ದೇನೆ ಇದು ನನಗೆ ಸಂತೋಷ, ಭಾವನಾತ್ಮಕ ಕ್ಷಣವಾಗಿದೆ. ಕಾರ್ಕಳ ಕ್ಷೇತ್ರದ ಜನ ಮೂರುಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಇಂದು ಪಕ್ಷ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದೆ. ಸಿಎಂ ಮತ್ತು ಪಕ್ಷದ ಹಿರಿಯರ ನಿರೀಕ್ಷೆಯಿಟ್ಟು ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನನಗೆ ಇಷ್ಟದ ಖಾತೆ ಎಂಬೂದು ಇಲ್ಲ ಮುಖ್ಯಮಂತ್ರಿಗಳು ಕೊಟ್ಟ ಖಾತೆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.
ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ನನ್ನದು ಯಾವತ್ತೂ ರಾಜಿ ಇಲ್ಲ. ಹಿಂದುತ್ವವೇ ನನ್ನ ಮೊದಲ ಆಯ್ಕೆಯಾಗಿದ್ದು, ಸಚಿವ- ಶಾಸಕ ಸ್ಥಾನ ಆ ನಂತರದ ಆಯ್ಕೆ ಯಾವುದೆ ಹಂತದಲ್ಲೂ ಹಿಂದುತ್ವ ವಿಚಾರದಲ್ಲಿ ರಾಜಿ ಮಾಡುವುದಿಲ್ಲ ಎಂದರು.
ಶಾಸಕ ಜಮೀರ್ ಅಹಮದ್ ಮನೆ ಮೇಲೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಒಂದು ಆಂತರಿಕ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಸಿದ್ದರಾಮಯ್ಯ ಡಿಕೆಶಿ ಅದು ಬೇರೆ ಬೇರೆ ಗುಂಪುಗಳಿವೆ. ಕಾಂಗ್ರೆಸ್ ನ ಗುಂಪುಗಳು ಪರಸ್ಪರ ವೈರತ್ವ ಸಾಧಿಸುತ್ತಿದೆ ಕಾಂಗ್ರೆಸ್ ಗೊಂದಲ ಆಗಾಗ ಒಂದೊಂದೇ ಬಹಿರಂಗ ಆಗುತ್ತಿದೆ. ಅದೇ ರೀತಿ ಜಮೀರ್ ಅಹಮದ್ ಪ್ರಕರಣ ಆಂತರಿಕ ಗೊಂದಲದ ಒಂದು ಭಾಗವಾಗಿದೆ.
ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧರಿಸಲಿದ್ದು ಸದ್ಯ ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾಗಿರಲಿದ್ದಾರೆ ಎಂದರು.