ಹಾಲೇರಿ ಜಲಧಾರೆಯ ಸೊಬಗ ನೋಡ ಬನ್ನಿ..!

Spread the love

ಹಾಲೇರಿ ಜಲಧಾರೆಯ ಸೊಬಗ ನೋಡ ಬನ್ನಿ..!

ಮಡಿಕೇರಿ: ಕೊಡಗಿನಲ್ಲಿ ಮಳೆಯಾಗುತ್ತಿರುವುದರಿಂದ ಬೆಟ್ಟಗುಡ್ಡ, ತೋಟಗಳ, ರಸ್ತೆ ಬದಿಯಲ್ಲಿದ್ದ ಜಲಧಾರೆಗಳೆಲ್ಲವೂ ಭೋರ್ಗರೆದು ಧುಮುಕಲಾರಂಭಿಸಿದ್ದು ಬೇಸಿಗೆಯಲ್ಲಿ ಸೊರಗಿ ಹೋಗಿದ್ದ ಸಣ್ಣಪುಟ್ಟ ಜಲಧಾರೆಗಳೆಲ್ಲವೂ ಧುಮ್ಮಿಕ್ಕಲಾರಂಭಿಸಿದ್ದು, ನೋಡುಗರ ಮೈಮನವನ್ನು ಪುಳಕಗೊಳಿಸುತ್ತಿವೆ.

ಕೊಡಗಿನಲ್ಲಿ ಹಲವಾರು ಜಲಧಾರೆಗಳಿದ್ದು ಒಂದಷ್ಟು ಜಲಧಾರೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಹೆಚ್ಚಿನ ಜಲಧಾರೆಗಳು ಜನರ ಕಣ್ಣಿಗೆ ಬೀಳದೆ ಅಜ್ಞಾತ ಜಲಪಾತಗಳಾಗಿ ಉಳಿದು ಹೋಗಿವೆ. ಇಂತಹ ಜಲಧಾರೆಗಳ ಪೈಕಿ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಜಲಧಾರೆಯೂ ಒಂದಾಗಿದೆ.

ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿರುವ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಕೆದಕಲ್‌ನಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ ಒಂದು ಕಿ.ಮೀ.ನಷ್ಟು ತೆರಳಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಜಲಧಾರೆ ಎದುರಾಗುತ್ತದೆ. ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುವ ಈ ಜಲಪಾತ ಪುಟ್ಟದಾದರೂ ಅದ್ಭುತವಾಗಿದೆ.

ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ ಐವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ ಹತ್ತು ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ. ಈ ಸುಂದರ ದೃಶ್ಯವನ್ನು ಸವಿಯುವುದೇ ಒಂಥರಾ ಮಜಾ.


Spread the love