ಹಾಸನ: ಶೆಟ್ಟಿಹಳ್ಳಿ ರೋಸರಿ ಚರ್ಚ್‌ ಅಭಿವೃದ್ಧಿಗೆ ರೂ.1.20 ಕೋಟಿ ವೆಚ್ಚದ ಕ್ರಿಯಾ ಯೋಜನೆ

Spread the love

ಹಾಸನ: ಶೆಟ್ಟಿಹಳ್ಳಿ ರೋಸರಿ ಚರ್ಚ್‌ ಅಭಿವೃದ್ಧಿಗೆ ರೂ.1.20 ಕೋಟಿ ವೆಚ್ಚದ ಕ್ರಿಯಾ ಯೋಜನೆ

ಹಾಸನ: ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಶೆಟ್ಟಿಹಳ್ಳಿ ರೋಸರಿ ಚರ್ಚ್‌ (ಜಪಮಾಲೆ ರಾಣಿ) ಅಭಿವೃದ್ಧಿಗೆ ಪುರಾತತ್ವ ಇಲಾಖೆ ₹1.20 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿದೆ.

1860ರಲ್ಲಿ ನಿರ್ಮಾಣವಾಗಿರುವ ಚರ್ಚ್‌ ಸಂರಕ್ಷಣೆಗೆ ದಶಕಗಳಿಂದ ಒತ್ತಾಯ ಕೇಳಿ ಬಂದಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ಹೇಮಾವತಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಅಧಿಕ ನೀರಿನಿಂದ ಮುಳುಗಡೆಯಾಗುವ ಚರ್ಚ್‌ ಶಿಥಿಲಾವಸ್ಥೆಗೆ ತಲುಪಿದೆ. ಚರ್ಚ್‌ ಉಳಿವಿಗೆ ನಾಗರಿಕರು ಹೋರಾಟ ನಡೆಸಿದ್ದರು. ಚರ್ಚ್‌ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರು.

ಕಳೆದ ಜುಲೈನಲ್ಲಿ ಶೆಟ್ಟಿಹಳ್ಳಿಗೆ ಭೇಟಿ ನೀಡಿದ್ದ ಅಂದಿನ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಚರ್ಚ್ ಕಟ್ಟಡ ಪರಿಶೀಲಿಸಿ ಅಧಿಕಾರಿಗಳಿಗೆ ಹಲವು, ಸಲಹೆ ಸೂಚನೆಗಳನ್ನು ನೀಡಿದರು. ‘ಶತಮಾನಗಳಷ್ಟು ಹಳೆಯದಾದ ಚರ್ಚ್ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರ ಆಗಿರುವುದರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವುದಾಗಿ’ ಭರವಸೆ ನೀಡಿದ್ದರು.

ಹಾಗಾಗಿ ಚರ್ಚ್‌ ಸಂರಕ್ಷಣೆಗೆ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2,573 ಚದರ ಅಡಿ ವಿಸ್ತೀರ್ಣದಲ್ಲಿರುವ ಚರ್ಚ್‌ ಸುತ್ತಲಿನ ಪ್ರದೇಶವನ್ನು ಸಮತಟ್ಟು ಮಾಡುವುದು, ತಳಪಾಯ ಗಟ್ಟಿಗೊಳಿಸುವುದು, ಗೋಡೆಗಳಿಗೆ ಕಲ್ಲುಗಳಿಂದ ಸ್ಟಿಚಿಂಗ್ ಮಾಡಲು ನಿರ್ಧರಿಸಲಾಗಿದೆ.

ಹಿಂಭಾಗದ ಗೋಪುರದ ಹವಾನಿಯಂತ್ರಣ ಪದರ ಹಾಗೂ ಮದ್ರಾಸ್‌ ತಾರಸಿ ತೆಗೆಯಲು ನಿರ್ಧರಿಸಲಾಗಿದೆ. ಚರ್ಚ್‌ನ ಗೋಡೆ, ಮಿನಾರ್‌, ಆರ್ಚ್‌ ಸಂರಕ್ಷಿಸಲು ಗೋಡೆಗೆ ಸುಣ್ಣದ ಗಾರೆಯಿಂದ ಮಡ್ಡಿ ಮಾಡಿ ನಂತರ ಹಿಂದಿನ ಶೈಲಿಯಲ್ಲಿಯೇ ಮಿನಾರ್‌ ಹಾಗೂ ಆರ್ಚ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ತಳಪಾಯ ಹಾಳಾಗದಂತೆ ಸುತ್ತಲೂ 5 ಕಿ.ಮೀ. ಎತ್ತರದಲ್ಲಿ ತಡೆಗೋಡೆ ನಿರ್ಮಿಸಿ, ಒಳಭಾಗದ ಸುತ್ತಲೂ ಗ್ರಾವೆಲ್‌ ಹಾಕಿ ಸಮತಟ್ಟು ಮಾಡಿ ಗಟ್ಟಿಗೊಳಿಸುವುದು ಹಾಗೂ ಹಿಂಭಾಗದ ಗೋಪುರಕ್ಕೆ ಮದ್ರಾಸ್‌ ತಾರಸಿ ಹಾಕಿ ಮಿನಾರ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ಶೆಟ್ಟಿಹಳ್ಳಿ ಸುತ್ತಲೂ ಅಂದಾಜು ಎರಡು ಸಾವಿರ ಕುಟುಂಬಗಳು ವಾಸಿಸುತ್ತಿದ್ದವು. ಹೇಮಾವತಿ ಜಲಾಶಯ ನಿರ್ಮಾಣದ ಬಳಿಕ ಗ್ರಾಮ ಸಂಪೂರ್ಣ ಮುಳುಗಡೆಯಾಯಿತು. ರೆವರೆಂಡ್‌ ಎಫ್‌ ಕಿಟಲ್‌ ಶೆಟ್ಟಿಹಳ್ಳಿ ಚರ್ಚ್‌ನಲ್ಲಿದ್ದರು.

ಹಲವು ವರ್ಷಗಳಿಂದ ಮಳೆಗಾಲದ ಎರಡು ತಿಂಗಳು ಹಿನ್ನೀರು ಹೆಚ್ಚಾಗುವ ಕಾರಣ ಈ ಚರ್ಚ್‌ ನೀರಲ್ಲೇ ತೇಲುವ ಹಾಗೆ ಕಾಣಿಸುತ್ತದೆ. ಇದು ‘ಮುಳುಗದ ಟೈಟಾನಿಕ್‌’ ಎಂಬ ಹೆಸರಿನಿಂದಲೂ ಪ್ರಸಿದ್ಧಿ ಪಡೆದಿದೆ.

‘ಮೈಸೂರಿನ ಸೆಂಟ್‌ ಫಿಲೋಮಿನಾ ಚರ್ಚ್‌ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ತಂಡವೇ ಚರ್ಚ್‌ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ. ಸಚಿವರು ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕ್ರಿಯಾಯೋಜನೆ ರೂಪಿಸಿ, ಸಲ್ಲಿಸಲಾಗಿದೆ. ಎಂದು ಪುರಾತತ್ವ ಇಲಾಖೆ ಸಂರಕ್ಷಣಾ ಸಹಾಯಕ ಸತೀಶ್ ತಿಳಿಸಿದರು.


Spread the love