
ಹಿಂದುತ್ವ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಳ ಆಧಾರದಲ್ಲಿ ಯಶ್ ಪಾಲ್ ಸುವರ್ಣರಿಗೆ ಬಹುಮತ : ರಘುಪತಿ ಭಟ್
ಉಡುಪಿ: ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಯಶ್ ಪಾಲ್ ಸುವರ್ಣ ರವರು ಹಿಂದುತ್ವದ ಆಧಾರದಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದು ಜಿಲ್ಲೆಯ ಹಿಂದೂ ಸಂಘಟನೆಯ ಜನಪ್ರಿಯ ನಾಯಕರಾಗಿದ್ದಾರೆ. ಎರಡು ಬಾರಿ ನಗರ ಸಭೆಯ ಸದಸ್ಯರಾಗಿ ಸಾರ್ವಜನಿಕ ಜೀವನದ ವಿಶೇಷ ಅನುಭವಗಳನ್ನು ಹೊಂದಿದ್ದಾರೆ ಎಂದು ಶಾಸಕರಾದ ರಘುಪತಿ ಭಟ್ ಹೇಳಿದರು.
ಅವರು ಪರ್ಕಳದಲ್ಲಿ ಹೆರ್ಗ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಸಾಮಾಜಿಕ ನೆಲೆಯಲ್ಲಿ ಉಭಯ ಜಿಲ್ಲೆಗಳ ಮೀನುಗಾರಿಕಾ ಫೆಡರೇಷನ್ ನ ಎರಡು ಅವಧಿಗೆ ಅಧ್ಯಕ್ಷರಾಗಿ ನಷ್ಟ ದಲ್ಲಿದ್ದ ಸಂಸ್ಥೆಯನ್ನು ಲಾಭದಲ್ಲಿ ತಂದು ನಿಲ್ಲಿಸಿದ್ದಾರೆ. ಮುಚ್ಚುವಂತಹ ಸ್ಥಿತಿಯಲ್ಲಿದ್ದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ ಅದನ್ನು ಪುನಶ್ಚೇತನಗೊಳಿಸಿ ಈಗ ಕೋಟ್ಯಾಂತರ ರೂಪಾಯಿಗಳ ಲಾಭದಲ್ಲಿ ನಡೆಯುವಂತೆ ಮಾಡಿದ್ದಲ್ಲದೆ ಮೀನುಗಾರರಿಗೆ ಈ ಸಂಸ್ಥೆಯ ಮೂಲಕ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರು ಹಿಂದುತ್ವ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯ ಆಧಾರದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಸಮರ್ಥ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತಗಳಿಂದ ವಿಜಯಿಯಾಗಲಿದ್ದಾರೆ ಎಂದು ಅವರು ಹೇಳಿದರು .
ರೌಡಿ ಕೊತ್ವಾಲನ ಶಿಷ್ಯನ ನೇತೃತ್ವದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ನೀತಿ ಪಾಠ ಕೇಳಬೇಕಾಗಿಲ್ಲ ಎಂದು ನಗರ ಬಿ.ಜೆ.ಪಿ ಅಧ್ಯಕ್ಷ ಮಹೇಶ್ ಠಾಕೂರ್ ಹೇಳಿದರು ಕಾಂಗ್ರೆಸ್ ಪಕ್ಷದ ಕರಾಳ ದಿನ ಈಗಾಗಲೆ ಚಾಲ್ತಿಯಲ್ಲಿದ್ದು ಅದು ಇನ್ನು ಮುಂದುವರೆಯಲಿದೆ ಎಂದ ಅವರು ಈ ಬಾರಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ಹೇಳಿದರು.
ನಗರ ಬಿ.ಜೆ.ಪಿ ಅಧ್ಯಕ್ಷರಾದ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕ್ಷೇತ್ರ ಪ್ರಭಾರಿಗಳಾದ ಗಣೇಶ್ ಹೊಸಬೆಟ್ಟು,ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಾಜಿ ಅಧ್ಯಕ್ಷರಾದ ದಿನಕರ್ ಶೆಟ್ಟಿ, ಕಿರಣ್ ಕುಮಾರ್, ನಗರ ಸಭಾ ಸದಸ್ಯರಾದ ಅಶ್ವಿನಿ ಪೂಜಾರಿ, ವಿಜಯಲಕ್ಷ್ಮೀ, ಕಲ್ಪನಾ ಸುಧಾಮ, ನಗರ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್, ಮಹಾಶಕ್ತಿ ಕೇಂದ್ರದ ಸಂಚಾಲಕರಾದ ಹೇಮಂತ್ ಪರ್ಕಳ, ಶಿವಾನಂದ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.