
ಹಿಂದೂಸ್ತಾನದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಸವಣ್ಣ ಬುನಾದಿ : ರಾಹುಲ್ ಗಾಂಧಿ
ಬಾಗಲಕೋಟೆ: ಹಿಂದೂಸ್ತಾನದ ಪ್ರಜಾಪ್ರಭುತ್ವ ವ್ಯವಸ್ಥೆಗೆ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಭದ್ರ ಬುನಾದಿ ಹಾಕಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.
ಕೂಡಲಸಂಗಮದಲ್ಲಿ ಭಾನುವಾರ ಬಸವಧರ್ಮ ಪೀಠದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕತ್ತಲು ಕವಿದಾಗ ಬೆಳಕು ಬರುತ್ತದೆ. ಮೂಡನಂಬಿಕೆ, ಅಂಧಶ್ರದ್ಧೆಯ ಸಮಾಜಕ್ಕೆ ಬೆಳಕಾಗಿ ಬಂದವರು ಬಸವಣ್ಣ ಎಂದರು.
ಬೇರೆಯವರನ್ನು ಪ್ರಶ್ನಿಸುವುದು ಸುಲಭ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವುದು ಕಷ್ಟ. ಪ್ರಶ್ನೆ ಕೇಳಿಕೊಳ್ಳುವುದಷ್ಟೇ ಅಲ್ಲ ತಾವು ಕಂಡುಕೊಂಡ ಸತ್ಯವನ್ನು ಸಮಾಜದ ಮುಂದಿಡುವ ಧೈರ್ಯ ಮಾಡಿದರು. ಜಾತಿ ಮತ ಪಂಥಗಳ ಬಗ್ಗೆ ಪ್ರಶ್ನೆ ಮಾಡಿದರು ಸತ್ಯ ಹಾಗೂ ಜೀವನದ ಸರಿಯಾದ ಮಾರ್ಗ ಕಂಡುಕೊಂಡರು. ಸತ್ಯದ ಮಾರ್ಗವನ್ನು ಜೀವನಪೂರ್ತಿ ಅನುಸರಿಸಿದರು ಎಂದರು.
ಹಲವರು ಪ್ರಶ್ನೆ ಕೇಳುತ್ತಾರೆ ಸತ್ಯವನ್ನು ಕಂಡುಕೊಳ್ಳುತ್ತಾರೆ ಆದರೆ ಭಯಪಟ್ಟು ಸಮಾಜದ ಮುಂದೆ ಇಡುವುದಿಲ್ಲ. ಬಸವಣ್ಣ ಸತ್ಯ ಹೇಳುವ ಮೂಲಕ ವಿಶ್ವಗುರುವಾದರು. ಸತ್ಯ ಹೇಳಿದ ಬಸವಣ್ಣನ ಮೇಲೆ ಆಕ್ರಮಣವಾಯಿತು ಬೆದರಿಸುವ ಕೆಲಸ ನಡೆಯಿತು ಆದರೆ ಹಿಂದೆ ಸರಿಯಲಿಲ್ಲ. ಅದಕ್ಕಾಗಿ ಸಮಾಜ ಅವರನ್ನು ಗೌರವಿಸುತ್ತದೆ ಎಂದರು.