ಹಿಂದೂ ದೇಗುಲಗಳ ರಕ್ಷಣೆ ಸರಕಾರದ ಪ್ರಥಮ ಆದ್ಯತೆಯಾಗಲಿ : ಯಶ್ ಪಾಲ್ ಸುವರ್ಣ

Spread the love

ಹಿಂದೂ ದೇಗುಲಗಳ ರಕ್ಷಣೆ ಸರಕಾರದ ಪ್ರಥಮ ಆದ್ಯತೆಯಾಗಲಿ : ಯಶ್ ಪಾಲ್ ಸುವರ್ಣ

ದೇಶದಾದ್ಯಂತ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಹಿಂದೂ ದೇಗುಲಗಳ ರಕ್ಷಣೆ ಸರಕಾರದ ಪ್ರಥಮ ಆದ್ಯತೆಯಾಗಲಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ದೇವಾಲಯದ ರಕ್ಷಣೆಯ ಬಗ್ಗೆ ಹಿಂದಿನ ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣದ ವೋಟ್ ಬ್ಯಾಂಕ್ ರಾಜಕಾರಣ ಧೋರಣೆಯಿಂದ ಸುಪ್ರೀಂಕೋರ್ಟಿಗೆ ಸೂಕ್ತ ವರದಿ ನೀಡದಿರುವ ಪರಿಣಾಮ ಇಂದು ದೇವಾಲಯಗಳನ್ನು ತೆರವುಗೊಳಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ..

ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ನಿಟ್ಟಿನಲ್ಲಿ ದೇವಾಲಯ ತೆರವು ಕಾರ್ಯಾಚರಣೆ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ವ್ಯರ್ಥಪ್ರಯತ್ನದಲ್ಲಿ ತೊಡಗಿದ್ದು, ತನ್ನ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯನ್ನು ಜನತೆ ಇನ್ನೂ ಮರೆತಿಲ್ಲ

ಹಿಂದುತ್ವದ ವಿಚಾರದಲ್ಲಿ ಎಂದೂ ರಾಜೀಯಾಗದ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ದೇಗುಲಗಳ ರಕ್ಷಣೆಗೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು ರೂಪಿಸಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರಕಾರ ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಲು ಕಾರ್ಯ ಪ್ರವೃತ್ತವಾಗಬೇಕು.

ಬೇರೆ ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಅಧಿಕೃತಗೊಳಿಸಲು ಅನುಸರಿಸಿರುವ ನಿಯಮಗಳನ್ನು ರಾಜ್ಯದಲ್ಲೂ ಅಳವಡಿಸಲು ಮುಂದಾಗಬೇಕು.

ಧಾರ್ಮಿಕ ಕೇಂದ್ರ ತೆರವು ಸಂಬಂಧ ಸುಪ್ರೀಂಕೋರ್ಟ್ ಆದೇಶದ ಕುರಿತು ಸಾರ್ವಜನಿಕರಲ್ಲಿ ಸೃಷ್ಟಿಯಾಗಿರುವ ಗೊಂದಲ ನಿವಾರಣೆಗೆ ಸರಕಾರ ಮುಂದಾಗಿ, ಈಗಾಗಲೇ ತೆರವುಗೊಳಿಸಿರುವ ದೇಗುಲಗಳನ್ನು ಅತೀ ಶೀಘ್ರದಲ್ಲೇ ಸರಕಾರದ ಅನುದಾನದಿಂದಲೇ ನಿರ್ಮಿಸಿ ಹಿಂದುತ್ವದ ರಕ್ಷಣೆಯ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love