ಹಿಮದ ಮಳೆ ಸುರಿಸುವ ಗೋಪಾಲಸ್ವಾಮಿ ಬೆಟ್ಟ

Spread the love

ಹಿಮದ ಮಳೆ ಸುರಿಸುವ ಗೋಪಾಲಸ್ವಾಮಿ ಬೆಟ್ಟ

ಎಲ್ಲಿ ನೋಡಿದರಲ್ಲಿ ಹಸಿರ ಚೆಲ್ಲಿ ಬಾನಿನಿಂದ ಸದ್ದಿಲ್ಲದೆ ಹಿಮದ ಮಳೆಗೆರೆಯುವ ನಿಸರ್ಗ ಸುಂದರ ತಾಣವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಇಲ್ಲಿಂದ ನಿಂತು ಸುತ್ತಲೂ ಕಣ್ಣಾಡಿಸಿದರೆ ಪ್ರಕೃತಿಯ ವಿಹಂಗಮ ನೋಟ ಕಣ್ಣನ್ನು ತಂಪಾಗಿಸುತ್ತದೆ. ಎತ್ತ ನೋಡಿದರೂ ಹಸಿರು ಹಚ್ಚಡದ ಸುಂದರ ಪ್ರಕೃತಿಯ ನೋಟ  ಖುಷಿ ಕೊಡುತ್ತದೆ. ಜತೆಗೆ ಎಲ್ಲೆಂದರೆಲ್ಲಿ ಹರಡಿ ನಿಂತ ಗಿರಿಶಿಖರಗಳು.. ಸಣ್ಣಗೆ ಸುರಿಯುವ ಹಿಮಮಳೆ.. ಒಬ್ಬರಿಗೊಬ್ಬರು ಕಾಣಿಸದಷ್ಟು ದಟ್ಟವಾಗಿ ಹರಡಿ ನಿಲ್ಲುವ ಮಂಜು.. ಅದರಾಚೆಗೆ ಸುಯ್ಯೆಂದು ಬೀಸುವ ಗಾಳಿಗೆ ತಲೆದೂಗುವ ಗಿಡಮರಗಳು.. ಆಗೊಮ್ಮೆ ಈಗೊಮ್ಮೆ ಮೌನವನ್ನು ಸೀಳಿಕೊಂಡು ಬರುವ ದೇಗುಲದ ಗಂಟೆಯ ನಿನಾದ ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.

ಕಳೆದ ಡಿಸೆಂಬರ್ ತನಕವೂ  ಮಳೆ ಸುರಿದ ಪರಿಣಾಮ ಈಗಲೂ ಇಡೀ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುವುದರೊಂದಿಗೆ ಹಸಿರ ಸ್ವರ್ಗವನ್ನು ಕಣ್ಮುಂದೆ ತಂದಿಟ್ಟಂತಿದೆ. ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿರುವ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ.

ಇಲ್ಲಿನ ಹಂಗಳ ಗ್ರಾಮದಿಂದ ಮುಂದಕ್ಕೆ ರಸ್ತೆಯಲ್ಲಿ ಸಾಗುತ್ತಿದ್ದರೆ ಆಕಾಶ ಭೂಮಿಯನ್ನು ಒಂದಾಗಿಸಿದಂತೆ ಕಾಣುವ ಮೋಡಗಳ ಆಟ, ಜೇನುಹುಳುಗಳ ಝೇಂಕಾರ… ಹಕ್ಕಿಗಳ ಇಂಚರ.. ಎಲ್ಲವೂ ಮುಂದೆ ಸಾಗಲು ಪ್ರೇರಣೆ ನೀಡುತ್ತವೆ. ಇನ್ನು ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ  ಗೋಪಾಲಸ್ವಾಮಿ ನೆಲೆನಿಂತಿದ್ದು, ಕೊಳಲೂದುವ ಶ್ರೀಕೃಷ್ಣನ ಮೂರ್ತಿ ಆಕರ್ಷಕವಾಗಿದೆ. ಇಲ್ಲಿಗೆ ಸಾಮಾನ್ಯವಾಗಿ  ಆಸ್ತಿಕರು-ನಾಸ್ತಿಕರನ್ನೆದೆ ಎಲ್ಲರೂ ಬರುತ್ತಾರೆ. ಹೀಗಾಗಿ ಇದೊಂದು ರೀತಿಯಲ್ಲಿ ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸದಾ ಒತ್ತಡಗಳಿಂದ ಕೂಡಿದ ಜೀವನ ನಡೆಸುವವರು, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳಲ್ಲಿ ಇಲ್ಲಿಗೆ ಬಂದರೆ ನಿಸರ್ಗ ಸುಂದರತೆಯನ್ನು ಸವಿಯುವುದರೊಂದಿಗೆ ಮಾನಸಿಕ  ನೆಮ್ಮದಿ ಪಡೆಯುಲು ಸಾಧ್ಯವಾಗುತ್ತದೆ.


Spread the love