
ಹಿಮವದ್ ಗೋಪಾಲಸ್ವಾಮಿ ಅದ್ಧೂರಿ ರಥೋತ್ಸವ
ಗುಂಡ್ಲುಪೇಟೆ:ತಾಲೂಕಿನ ಹಿಮವದ್ ಗೋಪಾಲ ಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ರಥೋತ್ಸವ ಭಕ್ತಸಾಗರದ ನಡುವೆ ಅದ್ಧೂರಿಯಾಗಿ ನಡೆಯಿತು.
ಪಾಲ್ಗುಣ ಕೃಷ್ಣ ಶ್ರಾವಣ ಏಕಾದಶಿ ಪ್ರಯುಕ್ತ ನಡೆದ ಹಿಮವದ್ ಗೋಪಾಲಸ್ವಾಮಿ ರಥೋತ್ಸವದಲ್ಲಿ ಸ್ಥಳೀಯರಲ್ಲದೆ ದೂರದೂರುಗಳಿಂದ ಆಗಮಿಸಿದ ಭಕ್ತರು ಗೋಪಾಲಸ್ವಾಮಿಯ ದರ್ಶನ ಮಾಡಿ ಪುನೀತರಾದರು. ದೇವರ ದರ್ಶನ ಪಡೆಯಲು ಬೆಳಗ್ಗಿನಿಂದಲೆ ಭಕ್ತರು ಆಗಮಿಸಿದ್ದರಲ್ಲದೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಉರಿ ಬಿಸಿಲಿನ ಸರದಿಯಲ್ಲಿ ನಿಂತ ಭಕ್ತರಿಗೆ ಯುವಕರು ನೀರು, ಪ್ರಸಾದ ವಿತರಿಸಿದರು.
ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ದೇವರ ವಿವಿಧ ಪೂಜಾ ಕೈಂಕರ್ಯಗಳು ನಡೆದರೂ ರಥೋತ್ಸವ ಬಹು ಮುಖ್ಯ ಮತ್ತು ಆಕರ್ಷಣೀಯವಾಗಿದೆ. ಮಾ.16ರಿಂದ ಆರಂಭವಾಗಿರುವ ಜಾತ್ರೆ ಮಾ.21ರಂದು ಸಮಾರೋಪಗೊಳ್ಳಲಿದೆ. ಅಲ್ಲಿಯವರೆಗೆ ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಭಯದಿಂದಾಗಿ ಜಾತ್ರೆಗಳು ಸಂಪ್ರದಾಯಕ್ಕೆ ಸೀಮಿತವಾಗಿದ್ದವು. ಆದರೆ ಈ ಬಾರಿ ಜಾತ್ರೆ ಕಳೆಕಟ್ಟಿದ್ದು, ಸ್ಥಳೀಯರಲ್ಲದೆ ದೂರದೂರುಗಳಿಂದ ಭಕ್ತರು ಆಗಮಿಸಿ ಗೋಪಾಲಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಾರ್ಚ್ 16ರಂದು ಬೆಳಿಗ್ಗೆ ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಸಂಜೆ ಭೇರಿತಾಡನ ಯಾಗಶಾಲಾ ಪ್ರವೇಶದೊಂದಿಗೆ ಜಾತ್ರೆ ಆರಂಭವಾಗಿದ್ದರೆ ಮಾ. 17ರಂದು ಶ್ರೀಯವರ ಉತ್ಸವ, ಸಂಜೆ 4ಗಂಟೆಗೆ ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ ಶ್ರೀ ರುಕ್ಮಿಣಿ ಸತ್ಯಭಾಮ ಸಹಿತ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ ನಡೆದಿದೆ.
ಮಾ. 18ರಂದು ಬೆಳಿಗ್ಗೆ ಡೋಲಾಯಮಾನಂ, ಗೋವಿಂದಂ ಮಂಚಸ್ಥಂ ಮಧುಸೂಧನಂ ರಥಸ್ಥಂ ಕೇಶವಂಷ್ಠ್ವಾಪುನರ್ಜನ್ಮ ನವಿದ್ಯತೇ ಎಂಬ ಮರ್ಯಾದೆಯಂತೆ ಶ್ರೀಯವರ ದಿವ್ಯ ಬ್ರಹ್ಮ ರಥೋತ್ಸವ ನಡೆದಿದ್ದರೆ, ಸಂಜೆ ಶಾಂತ್ಯುತ್ಸವ ಜರುಗಿತು. ಮಾರ್ಚ್ 19ರಂದು ಬೆಳಿಗ್ಗೆ ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ ಸಂಜೆ ಡೋಲೋತ್ಸವ ಶಯನೋತ್ಸವ, 20ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಸಂಜೆ ಉತ್ಸವ, ಫಣಿಮಾಲಾ ಪ್ರಬಂಧಸೇವೆ, ಪೂರ್ಣಾಹುತಿ, 21ರಂದು ಬೆಳಿಗ್ಗೆ ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ ಧ್ವಜಾರೋಹಣ, ಉಧ್ವಾಸನ ಪ್ರಬಂಧ ಸೇವೆ ಸೇತೂ ಸೇವೆ ಮೂಕಬಲಿ ಕಾರ್ಯಕ್ರಮಗಳೊಂದಿಗೆ ಜಾತ್ರೆಗೆ ತೆರೆಬೀಳಲಿದೆ.
ಜಾತ್ರೆಗೆ ಆಗಮಿಸುವ ಭಕ್ತರಿಗೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಿಂದ ಕೆ.ಎಸ್.ಆರ್.ಟಿ.ಸಿ ವಾಹನಗಳ ವ್ಯವಸ್ಥೆ ಮಾಡಿದೆ. ಹೀಗಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದ್ವಿಚಕ್ರ, ನಾಲ್ಕು ಚಕ್ರ, ಮಿನಿ ವಾಹನ ಮತ್ತು ಇತರೆ ವಾಹನಗಳಲ್ಲಿ ಬರುವ ಭಕ್ತರು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ನಂತರ ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ವಾಹನಗಳಲ್ಲಿ ನಿಗದಿಪಡಿಸಿರುವ ದರ ಪಾವತಿಸಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಥೋತ್ಸವ ಹಾಗೂ ದರ್ಶನಕ್ಕೆ ಹೋಗಿ ಬರಲು ವ್ಯವಸ್ಥೆ ಮಾಡಲಾಗಿದೆ.