Home Mangalorean News Kannada News ಹಿರಿಯ ನಾಗರೀಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ವಿಸ್ತರಣೆ

ಹಿರಿಯ ನಾಗರೀಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ವಿಸ್ತರಣೆ

Spread the love

ಹಿರಿಯ ನಾಗರೀಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ವಿಸ್ತರಣೆ
ಮ0ಗಳೂರು : ಅಸಂಘಟಿತ ಕಾರ್ಮಿಕರೂ ಸೇರಿದಂತೆ ಬಿಪಿಎಲ್ ಕುಟುಂಬಗಳ ಜನರಿಗೆ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಒದಗಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ.
   ಈ ಯೋಜನೆಯು ಈ ಹಿಂದೆ ಕಾರ್ಮಿಕ ಇಲಾಖೆಯಿಂದ ಅನುಷ್ಟಾನಗೊಳ್ಳುತ್ತಿತ್ತು.  ಕೇಂದ್ರ ಸರ್ಕಾರವು ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಹಿಸಿದೆ.  ಅದರಂತೆ ಕರ್ನಾಟಕದಲ್ಲಿ ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ.
   ಹಿರಿಯ ನಾಗರೀಕರಿಗೆ ಸಾಮಾಜಿಕ ಭದ್ರತೆಯು ಅವಶ್ಯವಿದ್ದು, ವಯೋಸಹಜ ಕಾರಣಗಳಿಂದ ಅವರಿಗೆ ಕೆಲಸ ನಿರ್ವಹಿಸಿ ಹಣಗಳಿಸಲು ಶಕ್ಯರಿರುವುದಿಲ್ಲವಾದ್ದರಿಂದ ಅಂತಹವರಿಗೆ ಜೀವನಾಧಾರ ಒದಗಿಸುವುದು ಸಾಮಾಜಿಕ ಭದ್ರತೆಯ ಮೂಲ ಉದ್ದೇಶ. ಈಗ ಭಾರತದಲ್ಲಿ ಅಂದಾಜು 90ಮಿಲಿಯನ್ ವಯೋವೃದ್ಧರಿದ್ದು, ಇದು 2050 ರ ಹೊತ್ತಿಗೆ 315 ಮಿಲಿಯನ್ ದಾಟುವ ಸಾಧ್ಯತೆಯಿರುತ್ತದೆ.
   ಆದರೆ ವಯಸ್ಸಾದ ವೃದ್ಧರ ಆರೋಗ್ಯದ ಸಮಸ್ಯೆಗಳು ಆರ್ಥಿಕ ಹೊರೆಗಳಿಗೆ ಕಾರಣವಾಗುತ್ತದೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2016-17 ಕ್ಕೆ ಅನ್ವಯವಾಗುವಂತೆ ಹಿರಿಯ ನಾಗರೀಕರಿಗೆ ಒಂದು ಪ್ರತ್ಯೇಕವಾದ ಟಾಪ್ ಅಪ್ ಸೇವೆಯನ್ನು ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರಸ್ತುತ ಇರುವ ಆರ್.ಎಸ್.ಬಿ.ವೈ. ಯೋಜನೆಯ ಚೌಕಟ್ಟಿನಲ್ಲಿ ನೀಡಲು ನಿರ್ಧರಿಸಿರುತ್ತದೆ.  ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯು ಪ್ರಮುಖವಾಗಿ ದ್ವಿತೀಯ ಹಂತದ ಕಾಯಿಲೆಗಳಿಗೆ ಸೇವೆ ನೀಡುತ್ತಿದ್ದು, ಕೇಂದ್ರ ಸರ್ಕಾರವು ಹಿರಿಯ ನಾಗರೀಕರಿಗಾಗಿ ಈಗ ಒಂದು ಟಾಪ್ ಅಪ್ ಭೆನಿಫಿಟ್ ಪ್ಯಾಕೇಜ್‍ನ್ನು ತೃತೀಯ ಹಂತದ ಕಾಯಿಲೆಗಳಿಗೂ ಕೂಡ ನೀಡಲು ನಿರ್ಧರಿಸಿದ್ದು, ಇದನ್ನು ಸೀನಿಯರ್ ಸಿಟಿಜನ್-ಆರ್.ಎಸ್.ಬಿ.ವೈ. ಯೋಜನೆ ಎಂದು ಕರ್ನಾಟಕದಲ್ಲಿನ ಹಿರಿಯ ನಾಗರೀಕರಿಗೆ ಅನ್ವಯವಾಗುವಂತೆ ನೀಡುತ್ತದೆ.    ಯೋಜನೆಯು ಅಷ್ಯುರೆನ್ಸ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಆರ್‍ಎಸ್‍ಬಿವೈ ಕಾರ್ಡ್ ಹೊಂದಿರುವ ಎಲ್ಲಾ ಹಿರಿಯ ನಾಗರೀಕರಿಗೆ ನಗದುರಹಿತ ಚಿಕಿತ್ಸೆ/ಶಸ್ತ್ರಚಿಕಿತ್ಸೆಯನ್ನು ತೃತೀಯ ಹಂತದ ಕಾಯಿಲೆಗಳಿಗೂ ಒದಗಿಸಲಾಗುತ್ತದೆ.
ಅನ್ವಯವಾಗುವ ಮೊತ್ತ: ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಆರ್.ಎಸ್.ಬಿ.ವೈ. ಸ್ಮಾರ್ಟ್ ಕಾರ್ಡ್ ಅನುಸಾರ ರೂ. 30000 ಗಳವರೆಗೆ ಚಿಕಿತ್ಸಾ ಸೌಲಭ್ಯವನ್ನು ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರವು ಹಿರಿಯ ನಾಗರೀಕರಿಗೆ ತೃತೀಯ ಹಂತದ ಚಿಕಿತ್ಸೆಗಳಿಗೆ ಒಂದು ವರ್ಷಕ್ಕೆ ಕುಟುಂಬವೊಂದಕ್ಕೆ, ರೂ. 1.50 ಲಕ್ಷಗಳವರೆಗೆ ಚಿಕಿತ್ಸಾ ವೆಚ್ಚ ನೀಡುತ್ತದೆ.
ಫಲಾನುಭವಿ : 60 ವರ್ಷ ಮತ್ತು ಅದಕ್ಕೂ ಮೀರಿರುವ ಹಿರಿಯ ನಾಗರೀಕರು ಆರ್.ಎಸ್.ಬಿ.ವೈ. ಕಾರ್ಡ್ ಹೊಂದಿದ್ದು, ಯೋಜನೆಯ ಫಲಾನುಭವಿಯಾಗಿದ್ದು, ಅವನ ಕುಟುಂಬದವರು ಈ ಟಾಪ್ ಅಪ್ ಪ್ಯಾಕೇಜ್ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಇದಲ್ಲದೆ ಆರ್.ಎಸ್.ಬಿ.ವೈ. ಕಾರ್ಡ್‍ನ್ನು ಹೊಂದಿಲ್ಲದ ಎಲ್ಲಾ ಹಿರಿಯ ನಾಗರೀಕರೂ ಕೂಡ ರಾಜ್ಯದಲ್ಲಿ ಜಾರಿಯಲ್ಲಿರುವ ಇತರ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
ಸೌಲಭ್ಯಗಳು: ಭೆನಿಫಿಟ್ ಪ್ಯಾಕೇಜ್‍ಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಯೋಜನೆಯಾದ ವಾಜಪೇಯಿ ಆರೋಗ್ಯಶ್ರೀಯಲ್ಲಿನ ದರಗಳನ್ನೊಳಗೊಂಡಿದ್ದು, ರಾಜ್ಯದಾದ್ಯಂತ ಏಕರೀತಿಯ ದರಗಳನ್ನೊಳಗೊಂಡಿರುತ್ತದೆ. ಒಟ್ಟು 5 ಸ್ಪೆಷಾಲಿಟಿಗಳಲ್ಲಿ ಅಂದರೆ ಹೃದಯರೋಗ, ಕ್ಯಾನ್ಸರ್, ನರರೋಗ, ಪಾಲಿಟ್ರಾಮಾ ಮತ್ತು ಸುಟ್ಟಗಾಯ ಕಾಯಿಲೆಗಳಿಗೆ ಸೇರಿದ 297 ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಹೃದಯರೋಗ, ಕ್ಯಾನ್ಸರ್ ಮತ್ತು ನರರೋರ ಕಾಯಿಲೆಗಳಿಗೆ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಬಳಿಕದ ಚಿಕಿತ್ಸೆಗಳನ್ನೊಳಗೊಂಡಿರುತ್ತವೆ. ಮೊದಲನೇ ಅನುಸರಣಾ ಚಿಕಿತ್ಸೆಯು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದಲೇ ದೊರೆಯುತ್ತದೆ. ಆನಂತರದ ಅನುಸರಣಾ ಚಿಕಿತ್ಸೆಗಳನ್ನು ಜಿಲ್ಲಾ ಆಸ್ಪತ್ರೆಗಳಲ್ಲೇ ಪಡೆಯುವ ವ್ಯವಸ್ಥೆ ಇರುವುದರಿಂದ ಫಲಾನುಭವಿಗಳು ದೂರದ ಆಸ್ಪತ್ರೆಗೆ ಪ್ರಯಾಣಿಸುವ ತೊಂದರೆಯು ತಪ್ಪುತ್ತದೆ.
  ಆಸ್ಪತ್ರೆಯಿಂದ ಚಿಕಿತ್ಸೆಗೆ ಕೋರಿಕೆ ಸಲ್ಲಿಕೆಯಾದ  6 ರಿಂದ 12 ಗಂಟೆಯೊಳಗಿನ ಅವಧಿಯಲ್ಲಿ ಅನುಮೋದನೆ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ.  ಚಿಕಿತ್ಸಾ ಸೌಲಭ್ಯವನ್ನು ಹೊಂದಿರುವ ನೊಂದಾಯಿತ ಆಸ್ಪತ್ರೆಗಳಲ್ಲಿ ಹಾಗೂ  ಜಿಲ್ಲಾ/ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಸುವರ್ಣ ಆರೋಗ್ಯ ಟ್ರಸ್ಟ್‍ನ ಪ್ರತ್ಯೇಕ ಕೌಂಟರ್ (ಕಿಯೋಸ್ಕ್) ಹೊಂದಿದ್ದು, ಈ ಕೇಂದ್ರದ ಮೂಲಕ ಚಿಕಿತ್ಸಾ ಸೌಲಭ್ಯಗಳು, ಮಾಹಿತಿ ಮತ್ತು ಸಲಹೆ ಮತ್ತಿತರ ಸೇವೆಗಳನ್ನು ಒದಗಿಸುತ್ತದೆ.  ಮತ್ತು ಇದರಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮಿತ್ರರು ಫಲಾನುಭವಿಗಳಿಗೆ ಚಿಕಿತ್ಸೆ ಕೊಡಿಸಲು ಸಹಕರಿಸುತ್ತಾರೆ.
ಯೋಜನೆಯಡಿಯಲ್ಲಿ  ದಕ್ಷಿಣ ಕನ್ನಡ ನೋಂದಾವಣೆಗೊಂಡಿರುವ ಆಸ್ಪತ್ರೆಗಳ ವಿವರ – ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಎ.ಜೆ.ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಕಂಕನಾಡಿ, ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ. ಜ್ಯೋತಿ, ಎಂ.ಐ.ಓ. ಆಸ್ಪತ್ರೆ, ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಯೆನಪೋಯ ಆಸ್ಪತ್ರೆ ದೇರಳಕಟ್ಟೆ, ಯೆನಪೋಯ ಆಸ್ಪತ್ರೆ ಕೊಡಿಯಾಲಬೈಲ್ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Exit mobile version