ಹಿರಿಯ ಸಾಹಿತಿ, ಬಹುಮುಖಿ ಪ್ರತಿಭಾವಂತ ಅಂಬಾತನಯ ಮುದ್ರಾಡಿ ನಿಧನ

Spread the love

ಹಿರಿಯ ಸಾಹಿತಿ, ಬಹುಮುಖಿ ಪ್ರತಿಭಾವಂತ ಅಂಬಾತನಯ ಮುದ್ರಾಡಿ ನಿಧನ
 

ಉಡುಪಿ: ಸಾಹಿತಿ, ನಿವೃತ್ತ ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಪ್ರಸಂಗ ಕರ್ತ ಬಹುಮುಖಿ ಪ್ರತಿಭಾವಂತ ಅಂಬಾತನಯ ಮುದ್ರಾಡಿ (88) ಅವರು ಇಂದು ನಿಧನ ಹೊಂದಿದರು.

1935ರ ಜೂನ್ 4ರಂದು ಕಾರ್ಕಳದ ಮುದ್ರಾಡಿಯಲ್ಲಿ ಜನಿಸಿದ ಅಂಬಾತನಯ ಮುದ್ರಾಡಿ ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಪಡೆದಿದ್ದರು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು.

ಅಂಬಾತನಯ ಮುದ್ರಾಡಿ ಅವರು ಸತತ ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿದು 1993ರಲ್ಲಿ ನಿವೃತ್ತಿ ಪಡೆದರು.

ಅಂಬಾತನಯ ಮುದ್ರಾಡಿ ಅವರು ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಶಿಕ್ಷಕರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ, ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಪರಿಶ್ರಮ ವಹಿಸಿದವರು, ಇತ್ತೀಚೆಗೆ ನಡೆದ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಇದೇ ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು.

ಸಾಹಿತ್ಯ ಕೃಷಿಗಾಗಿ ಮುದ್ರಾಡಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.

ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ. ಮಂಗಳವಾರ ಸಂಜೆ ಮುದ್ರಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.


Spread the love