ಹೀಗೊಂದು ವಿನೂತನ ಪ್ರಯತ್ನ! ಕಟ್ಟುನಿಟ್ಟಿನ ಲಾಕ್‌ಡೌನ್ ಇಲ್ಲ, ಕೊರೋನಾ ಸೋಂಕಿತರ ಮನೆಗಳಿಗೆ ದಿನಸಿ ಕಿಟ್

Spread the love

ಹೀಗೊಂದು ವಿನೂತನ ಪ್ರಯತ್ನ! ಕಟ್ಟುನಿಟ್ಟಿನ ಲಾಕ್‌ಡೌನ್ ಇಲ್ಲ, ಕೊರೋನಾ ಸೋಂಕಿತರ ಮನೆಗಳಿಗೆ ದಿನಸಿ ಕಿಟ್

  • ಹೋಮ್ ಐಸೊಲೇಶನ್‌ನಲ್ಲಿದ್ದವರು ಹೊರಗಡೆ ಬಾರದಂತೆ ಕೈಮುಗಿದು ಮನವಿ.
  • ವಿಶೇಷಚೇತನರಿಗೆ, ಆಶಾ ಕಾರ್ಯಕರ್ತೆಯರಿಗೆ, ಕೋವಿಡ್ ಪಾಸಿಟಿವ್ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ.
  • ಹೆಮ್ಮಾಡಿ ಗ್ರಾಮ ಪಂಚಾಯಿತಿ ಮಾದರಿ ಕಾರ್ಯಕ್ಕೆ ಸರ್ವತ್ರ ಶ್ಲಾಘನೆ.

ಕುಂದಾಪುರ: ಗ್ರಾಮೀಣ ಭಾಗಗಳಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೆಲ ಗ್ರಾ.ಪಂ ಗಳು ಸ್ವಯಂಪ್ರೇರಿತ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದರೆ ಇಲ್ಲೊಂದು ಗ್ರಾ.ಪಂ ಮಾತ್ರ ಹೆಚ್ಚುವರಿ ಲಾಕ್‌ಡೌನ್ ಜಾರಿಗೊಳಿಸದೆ ಸಾರ್ವಜನಿಕರಿಗೆ ತೊಂದರೆಯಾಗದತೆ ಕೊರೋನಾ ಸೋಂಕಿತರ ಮನೆಮನೆಗೆ ತೆರಳಿ ದಿನಸಿ ಕಿಟ್ ವಿತರಿಸುವ ಮೂಲಕ ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ.

ತಾಲೂಕಿನ ಹಲವು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಆಯಾಯ ಗ್ರಾಮಪಂಚಾಯಿತಿಗಳು ಟಾಸ್ಕ್ಪೋರ್ಸ್ ಸಮಿತಿಯ ಸಭೆ ಕರೆದು ವರ್ತಕರು, ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಸ್ವಯಂಪ್ರೇರಿತ ಲಾಕ್‌ಡೌನ್ ಜಾರಿಗೊಳಿಸಿದೆ. ತಾಲೂಕಿನ ಆಲೂರು, ವಂಡ್ಸೆ, ಇಡೂರು, ಕುಂಜ್ಙಾಡಿ, ತಲ್ಲೂರು ಮೊದಲಾದ ಪಂಚಾಯಿತಿಗಳು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದೆ. ಆದರೆ ಹೆಮ್ಮಾಡಿಯಲ್ಲಿ ಮಾತ್ರ ಸಾರ್ವಜನಿಕರಿಗೆ ತೊಂದರೆಯಾಗದAತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲೇ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಹೋಮ್ ಐಸೊಲೇಶನ್‌ನಲ್ಲಿರುವವರು ಮನೆಯಿಂದ ಹೊರಗಡೆ ಬಾರದಂತೆ ಅವರ ಮನೆಗೆ ತೆರಳಿ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸುತ್ತಿದೆ.

ವಿಭಿನ್ನ ಆಲೋಚನೆ: ಮನೆಮನೆಗೆ ತೆರಳಿ ಕಿಟ್ ವಿತರಣೆ:
ಹೀಗೊಂದು ವಿಭಿನ್ನಾಲೋಚನೆಗೆ ಮುಂದಾದ ಹೆಮ್ಮಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಯು. ಸತ್ಯನಾರಾಯಣ್ ರಾವ್ ಅವರಿಗೆ ಎಲ್ಲಾ ಸದಸ್ಯರು, ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗ ಕೈಜೋಡಿಸಿದೆ. ಇದಕ್ಕಾಗಿಯೇ ಹೆಮ್ಮಾಡಿ ಪರಿಸರದ ಸಹಕಾರಿ ಸೊಸೈಟಿಗಳ  ಸಹಾಯಹಸ್ತ ಕೋರಿದ ಪಂಚಾಯಿತಿಗೆ ಎಲ್ಲಾ ಸಹಕಾರಿ ಸಂಸ್ಥೆಗಳು ಆರ್ಥಿಕ ಸಹಾಯಕ್ಕೆ ಮುಂದಾಗಿವೆ. ತಾವೇ ದಿನಸಿ ವಸ್ತಗಳನ್ನು ಖರೀದಿಸಿ ಸದಸ್ಯರು, ಸಿಬ್ಬಂದಿಗಳು ಸೇರಿ ಪಂಚಾಯಿತಿ ಸಭಾಭವನದಲ್ಲಿ ಪೊಟ್ಟಣಗಳಾಗಿ ಕಿಟ್‌ಗಳನ್ನು ತಯಾರಿಸುತ್ತಿದ್ದಾರೆ. ತಯಾರಿಸಿದ ಕಿಟ್‌ಗಳನ್ನು ಆಯಾ ವಾರ್ಡ್ ಸದಸ್ಯರೊಡಗೂಡಿ ಕೊರೋನಾಪೀಡಿತ ಕುಟುಂಬ ಹಾಗೂ ವಿಶೇಷಚೇತನ ಕುಟುಂಬಗಳಿಗೆ ಕಿಟ್‌ಗಳನ್ನು ಹಸ್ತಾಂತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಸಹಕಾರಿ ಬ್ಯಾಂಕ್‌ಗಳ ಸಹಕಾರ:
ಹೆಮ್ಮಾಡಿ ಗ್ರಾ.ಪಂ ಜೊತೆ ಇಲ್ಲಿನ ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಕೈಜೋಡಿಸಿದೆ. ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಪ್ರಗತಿ ಮಹಿಳಾ ಸಹಕಾರಿ ಸಂಘ, ಪಂಚಗAಗಾ ರೈತರ ಸೇವಾ ಸಹಕಾರಿ ಬ್ಯಾಂಕ್‌ಗಳು ಸಹಕಾರ ನೀಡಿವೆ.

೧೯ ಪಾಸಿಟಿವ್ ಪ್ರಕರಣ:
ಪ್ರಸ್ತುತ ಹೆಮ್ಮಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೧೭ ಕುಟುಂಬಗಳಲ್ಲಿ ೧೯ ಪಾಸಿಟಿವ್ ಪ್ರಕರಣಗಳಿವೆ. ೧೯ ಮಂದಿಯೂ ಆಸ್ಪತ್ರೆಗೆ ದಾಖಲಾಗದೆ ಹೋಮ್ ಐಸೊಲೇಶನ್‌ನಲ್ಲಿದ್ದಾರೆ. ಹೋಮ್ ಐಸೊಲೇಶನ್‌ನಲ್ಲಿದ್ದವರಿಗೆ ಟಾಸ್ಕ್ಪೋರ್ಸ್ ಸಮಿತಿ ಆಗಾಗೆ ತೆರಳಿ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಿದೆ.

ಕೊರೋನಾ ತಡೆಗೆ ಲಾಕ್‌ಡೌನ್ ಒಂದೇ ಅಸ್ತೃವಲ್ಲ:
ಇನ್ನು ಎಲ್ಲೆಡೆ ಹೋಮ್ ಐಸೊಲೇಶನ್‌ನಲ್ಲಿದ್ದವರು ಹೊರಗಡೆ ತಿರುಗುತ್ತಿರುವುದರಿಂದ ಪ್ರಕರಣಗಳು ಏರಿಕೆಯಾಗುತ್ತಿದೆ ಎನ್ನುವ ಸುದ್ದಿ ಆತಂಕಕ್ಕೀಡುಮಾಡಿದೆ. ಆದರೆ ಕೊರೋನಾ ತಡೆಗೆ ಲಾಕ್‌ಡೌನ್ ಒಂದೇ ಅಸ್ತೃವಲ್ಲ ಎಂದು ವಿಭಿನ್ನ ರೀತಿಯಾಗಿ ಆಲೋಚನೆ ಮಾಡಿದ ಹೆಮ್ಮಾಡಿ ಪಂಚಾಯಿತಿ ಸೋಂಕಿತರು ಹೊರಗೆ ಬಂದು ಕೊರೋನಾ ಹಬ್ಬಿಸದಂತೆ ಸ್ವತಃ ಅವರಿದ್ದಲ್ಲಿಗೆ ತೆರಳಿ ದಿನಸಿ ಸಾಮಗ್ರಿಗಳ ಕಿಟ್ ವಿತರಿಸುತ್ತಿದೆ.

ತಲ್ಲೂರು ಬಂದ್.. ಹೆಮ್ಮಾಡಿಯಲ್ಲಿ ಜನಜಾತ್ರೆ!:
ಕೊರೋನಾ ತಡೆಗಾಗಿ ಕೆಲ ಪಂಚಾಯಿತಿಗಳು ಸ್ವಯಂಪ್ರೇರಿತ ಲಾಕ್‌ಡೌನ್ ವಿಧಿಸಿಕೊಂಡಿದ್ದರಿAದ ಶನಿವಾರ ತಲ್ಲೂರು ಗ್ರಾ.ಪಂ ಕೂಡ ಸ್ವಯಂಪ್ರೇರಿತ ಲಾಕ್‌ಡೌನ್ ಜಾರಿಗೊಳಿಸಿದೆ. ಬೆಳಿಗ್ಗೆಯಿಂದಲೇ ಯಾವುದೇ ದಿನಸಿ, ತರಕಾರಿ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಆದರೆ ತಲ್ಲೂರು ಆಸುಪಾಸಿನವರು ಅಲ್ಲೇ ಸಮೀಪದ ಹೆಮ್ಮಾಡಿಗೆ ಬಂದು ದಿನಸಿ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಸರ್ಕಾರ ಅಗತ್ಯ ವಸ್ತುಗಳ ಖರೀದಿಗಾಗಿ ನಿಗಧಿಪಡಿಸಿರುವ ಸಮಯದಲ್ಲಿ ತಲ್ಲೂರಿನ ಆಸುಪಾಸಿನವರು ಖರೀದಿಗೆ ಬಂದ ಕಾರಣ ಹೆಮ್ಮಾಡಿ ಪೇಟೆ ಶನಿವಾರ ಜನಜಾತ್ರೆಯಾಗಿ ಪರಿಣಮಿಸಿತು.

ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದರೆ ಜನಸಾಮಾನ್ಯರಿಗೆ ತೊಂದರೆಗಳಾಗುತ್ತದೆ. ಹೀಗಾಗಿ ಸೋಂಕಿತರ ಮನೆಗಳಿಗೆ ದಿನಸಿ ವಸ್ತುಗಳನ್ನು ಹಸ್ತಾಂತರಿಸುವ ಯೋಜನೆಗೆ ಕೈ ಹಾಕಿದೆವು. ನಮಗೆ ನಮ್ಮೂರಿನ ಸಹಕಾರಿ ಬ್ಯಾಂಕ್‌ಗಳು ಆರ್ಥಿಕವಾಗಿ ಕೈಜೋಡಿಸಿದ್ದರಿಂದ ಇದು ಯಶಸ್ವಿಯಾಗಲು ಸಾಧ್ಯವಾಗಿದೆ. ದಿನಸಿ ಕಿಟ್‌ಗಳನ್ನು ಕೊಡುವ ಜೊತೆಗೆ ಅವರು ಮನೆಯಿಂದ ಹೊರಗಡೆ ಬಾರದಂತೆ ತಿಳಿಹೇಳಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಕೊರೋನಾ ಮುಕ್ತ ಪಂಚಾಯಿತಿಗಾಗಿ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳು, ಟಾಸ್ಕ್ಪೋರ್ಸ್ ಸಮಿತಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಯು. ಸತ್ಯನಾರಾಯಣ ರಾವ್

ಸೋಂಕಿತರಿಗೆ, ಕೊರೋನಾ ವಾರಿಯರ್ಸ್ಗೆ, ವಿಶೇಷಚೇತನರಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಲು ಆರ್ಥಿಕವಾಗಿ ಸಹಾಯವಾಗಲು ಅಧ್ಯಕ್ಷರು ಮನವಿ ಮಾಡಿಕೊಂಡಿದ್ದರು. ಕೊರೋನಾ ಸಂದಿಗ್ಧತೆಯಲ್ಲಿ ಎಲ್ಲರೂ ಕಷ್ಟದಲ್ಲಿದ್ದಾರೆ. ಒಂದು ಪಂಚಾಯಿತಿ ವಿಶೇಷ ಮುತುವರ್ಜಿ ವಹಿಸಿ ಈ ರೀತಿಯಾಗಿ ಮಾದರಿ ಕೆಲಸ ಮಾಡುತ್ತಿರುವುದು ಹೆಮ್ಮೆ ಅನಿಸುತ್ತಿದೆ. ಹೀಗಾಗಿ ಆಡಳಿತ ಮಂಡಳಿಯ ಒಪ್ಪಿಗೆ ಮೇರೆಗೆ ಆರ್ಥಿಕ ಸಹಾಯಕ್ಕೆ ಮುಂದಾಗಿದ್ದೇವೆ. ಕಿಟ್ ವಿತರಣೆಯ ಸಂಪೂರ್ಣ ಉಸ್ತುವಾರಿ ಪಂಚಾಯಿತಿ ವಹಿಸಿಕೊಂಡಿದೆ. ಆದಷ್ಟು ಬೇಗ ಕೊರೋನಾ ಮಹಾಮಾರಿ ತೊಲಗಲಿ ಎನ್ನುತ್ತಾರೆ ಪ್ರಗತಿ ಮಹಿಳಾ ಸಹಕಾರಿ ಸಂಘ ಹೆಮ್ಮಾಡಿ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್


Spread the love