ಹುಣಸೂರು: ಹೃದಯಾಘಾತದಿಂದ ಯೋಧ ಸಾವು

Spread the love

ಹುಣಸೂರು: ಹೃದಯಾಘಾತದಿಂದ ಯೋಧ ಸಾವು

ಹುಣಸೂರು: ರಜೆ ಮೇಲೆ ಸ್ವಗ್ರಾಮಕ್ಕಾಗಮಿಸಿದ್ದ ಬಂದಿದ್ದ ಸೈನಿಕರೊಬ್ಬರು ಮನೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಚಿಟ್ಟಕ್ಯಾತನಹಳ್ಳಿಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಚಿಟ್ಟಕ್ಯಾತನಹಳ್ಳಿ ಗ್ರಾಮದ ಕೃಷ್ಣೇಗೌಡರ ಏಕೈಕ ಪುತ್ರ ಮಹೇಶ್(32) ಮೃತರು. ತಂದೆ, ಸಹೋದರಿ, ಪತ್ನಿ ವಿನೋದ, ಐದು ವರ್ಷದ ಮಗಳಿದ್ದಾಳೆ.

ಮಹೇಶ್ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅ.3ಕ್ಕೆ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದ ಇವರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬೆರೆತು ರಜೆ ಕಳೆಯುತ್ತಿದ್ದರು. ನ.1ಕ್ಕೆ ಕರ್ತವ್ಯಕ್ಕೆ ಮರಳಬೇಕಿತ್ತು.

ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದರು, ಬೆಳಗ್ಗೆ 6ರ ವೇಳೆಗೆ ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು ವಾರಸುದಾರರಿಗೆ ಒಪ್ಪಿಸಿದರು. ಕುಟುಂಬದವರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಾಸಕ ಎಚ್.ಪಿ.ಮಂಜುನಾಥ್, ತಹಸೀಲ್ದಾರ್ ಕರ್ನಲ್ ಡಾ.ಅಶೋಕ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಜಿ.ಪಂ.ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸಿ.ವಿ.ರವಿ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು.


Spread the love