ಹುಬ್ಬಳ್ಳಿ ಉದ್ಯಮಿ ರಮೇಶ ಬೋನಗೇರಿ ಮನೆ ಮೇಲೆ ಸಿಸಿಬಿ ದಾಳಿ: ರೂ 3 ಕೋಟಿ ನಗದು ವಶ

Spread the love

ಹುಬ್ಬಳ್ಳಿ ಉದ್ಯಮಿ ರಮೇಶ ಬೋನಗೇರಿ ಮನೆ ಮೇಲೆ ಸಿಸಿಬಿ ದಾಳಿ: ರೂ 3 ಕೋಟಿ ನಗದು ವಶ

ಹುಬ್ಬಳ್ಳಿ: ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ರೂ3 ಕೋಟಿ ನಗದನ್ನು ಸಿಸಿಬಿ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಸಿಸಿಬಿ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ ಭವಾನಿನಗರದ ಉದ್ಯಮಿ ರಮೇಶ ಬೋನಗೇರಿ ಅವರ ಮನೆ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಿಸಿಟ್ಟಿದ್ದ ಹಣವನ್ನು ಪತ್ತೆ ಹಚ್ಚಿದೆ.

ರೂ 500 ಮುಖ ಬೆಲೆಯ ರೂ3 ಕೋಟಿ ನಗದು ಪತ್ತೆ ಹಚ್ಚಿರುವ ತಂಡ, ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ನೀಡುವಂತೆ ಮನೆ ಮಾಲೀಕರಲ್ಲಿ ವಿನಂತಿಸಿದೆ. ಸರಿಯಾದ ಮಾಹಿತಿ ನೀಡದ ಕಾರಣ ಹಣವನ್ನು ವಶಪಡಿಸಿಕೊಂಡು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

‘ಹಣದ ಮೂಲ ಮತ್ತು ಅಷ್ಟೊಂದು ಹಣ ಸಂಗ್ರಹಿಸಿಡಲಾಗಿದ್ದ ಉದ್ದೇಶಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ. ಹೆಚ್ಚಿನ ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇನ್ಸ್ಪೆಕ್ಟರ್ ಎಸ್.ಕೆ. ಪಟ್ಟಣಕುಡೆ ತನಿಖೆ ಮುಂದುವರಿಸಿದ್ದಾರೆ’ ಎಂದು ಕಮಿಷನರ್ ರಮನ್ ಗುಪ್ತಾ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್ಥಿಕ ಅಪರಾಧಗಳ ವಿಶೇಷ ತನಿಖಾ ತಂಡದ ಎಎಸ್ಐ ಬಿ.ಎನ್. ಲಂಗೋಟಿ, ಸಿಬ್ಬಂದಿಯಾದ ಬಸವರಾಜ ಬೆಳಗಾವಿ, ಎಫ್.ಬಿ. ಕುರಿ, ರಾಜೀವ್ ಬಿಷ್ಟಂಡೇರ್, ಸಂತೋಷ ಇಚ್ಚಂಗಿ, ವಿದ್ಯಾ ದಳವಾಯಿ ಪಾಲ್ಗೊಂಡಿದ್ದರು. ಸಿಬ್ಬಂದಿಯ ಕಾರ್ಯಕ್ಕೆ ಕಮಿಷನರ್ ಗುಪ್ತಾ ಅವರು ರೂ 25 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.


Spread the love

Leave a Reply

Please enter your comment!
Please enter your name here