
ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರ ಬಂಧನ
ಹನೂರು: ತಾಲ್ಲೂಕಿನ ಪಿ.ಜಿ ಪಾಳ್ಯ ಗ್ರಾಮದ ಅಡ್ಡ ರಸ್ತೆ ಬಳಿ ಅಕ್ರಮವಾಗಿ ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಅಂಡೆಕುರುಬರ ದೊಡ್ಡಿ ಗ್ರಾಮದ ಗೋಪಾಲ ಹಾಗೂ ರಾಯಚೂರು ಜಿಲ್ಲೆಯ ಹನುಮೇಶ ಬಂಧಿತರು. ಇವರು ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಜಿ.ಪಾಳ್ಯ ಗ್ರಾಮದ ಅಡ್ಡರಸ್ತೆ, ಹತ್ತಿರ (ಕೆ.ಎ-10 ಎಲ್-3616) ಹೀರೋ ಹೊಂಡಾ ಗ್ಲಾಮರ್ ನಲ್ಲಿ ಹುಲಿಯ ಉಗುರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಹನೂರು ಪೊಲೀಸ್ ಠಾಣೆಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಬಂಧಿತರನ್ನು ಶೋಧಿಸಿದ ವೇಳೆ ವನ್ಯಜೀವಿ ಹುಲಿಯ 40 ಉಗುರುಗಳು ಹಾಗೂ ಹುಲಿಯ 02 ಹಲ್ಲುಗಳು ಆರೋಪಿಗಳ ಬಳಿ ಸಿಕ್ಕಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹುಲಿಯ ಉಗುರು ಹಾಗೂ ಹಲ್ಲುಗಳನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡಲು ಯತ್ನಿಸಿದ ಹಿನ್ನಲೆಯಲ್ಲಿ ಆರೋಪಿಗಳನ್ನು ವನ್ಯಜೀವಿ ಸಂರಕ್ಷಾಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ವಿಜಯ್ ರಾಜ್, ಮುಖ್ಯಪೇದೆಗಳಾದ ಶಂಕರ್, ಬಸವರಾಜು, ಸ್ವಾಮಿ, ರಾಮಚಂದ್ರ ಚಾಲಕ ಪ್ರಭಾಕರ್ ಇತರರು ಇದ್ದರು.