ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು: ಮಣಿಪಾಲ ಪೊಲೀಸರಿಂದ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ

Spread the love

ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು: ಮಣಿಪಾಲ ಪೊಲೀಸರಿಂದ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ

ಮಣಿಪಾಲ: ಇತ್ತೀಚಿಗೆ ಕರಾವಳಿ ಭಾಗದಲ್ಲಿ ಹೆಚ್ಚು ಮನೆ ಕಳ್ಳತನ ಪ್ರಕರಣಗಳು ವರದಿ ಆಗುತ್ತಿರುವುದರಿಂದ ಮಣಿಪಾಲ ಪೊಲೀಸರು ಧ್ವನಿ ವರ್ಧಕ ಹಾಗೂ ಕರಪತ್ರ ಹಂಚುವುದರ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

ಮನೆಯಿಂದ ಹೊರಗೆ ತೆರಳುವಾಗ ಮುಂಬಾಗಿಲಿಗೆ ಕಾಣುವಂತಹ ದಪ್ಪ ಬೀಗಗಳನ್ನು ಹಾಕದೇ ಸೆಂಟ್ರಲ್ ಲಾಕ್ ಸಿಸ್ಟಮ್‌ಗಳನ್ನು ಹಾಕುವುದರಿಂದ ಮನೆಯ ಒಳಗೆ ಯಾರಾದರೂ ಇದ್ದಾರೆ ಎಂದು ಭಾಸವಾಗುತ್ತದೆ. ಮನೆಯ ಗೇಟಿಗೆ ಕಾಣುವಂತಹ ದೊಡ್ಡ ಬೀಗ ಹಾಕುವುದರಿಂದ ರಸ್ತೆಯಲ್ಲಿ ಓಡಾಡುವವರಿಗೆ ಈ ಮನೆಯಲ್ಲಿ ಯಾರು ಇಲ್ಲ ಎಂದು ಸುಲಭವಾಗಿ ಊಹೆ ಮಾಡಿ ಕಳ್ಳತನ ಮಾಡಬಹುದಾಗಿದೆ. ಅದುದರಿಂದ ಗೇಟುಗಳಿಗೆ ಬೀಗಗಳನ್ನು ಹಾಕಬಾರದು.

ಮನೆಯ ಎಲ್ಲಾ ಸದಸ್ಯರು ಕೆಲವು ದಿನಗಳ ವರೆಗೆ ಮನೆಯಿಂದ ಹೊರಗೆ ಉಳಿದಾಗ ದಿನ ಪತ್ರಿಕೆ ಮತ್ತು ಹಾಲು ಹಾಕುವವರಿಗೆ ಹಾಕದಂತೆ ಸೂಚನೆ ನೀಡುವುದು. ಮನೆಯ ಮುಂದೆ 3-4 ದಿನಗಳ ಪತ್ರಿಕೆ ಹಾಗೇ ಉಳಿದರೆ ಈ ಮನೆಯಲ್ಲಿ ಯಾರು ಇಲ್ಲ ಎಂದು ಸುಲಭವಾಗಿ ಊಹಿಸಬಹುದು. ಹೊರಗಡೆ ಹೋಗುವಾಗ ನೆರಹೊರೆಯವರಿಗೆ ಅಥವಾ ಸಂಬಂಧಿಕರಿಗೆ ಮನೆಯ ಕಡೆಗೆ ಗಮನ ಹರಿಸುವಂತೆ ಹೇಳಿ ಹೋಗಬೇಕು. ಊರಿನಿಂದ ಹೊರಗೆ ಹೋಗುವಾಗ ಪೊಲೀಸ್‌ ಠಾಣೆಗೂ ಸಹ ಮಾಹಿತಿ ನೀಡಬಹುದಾಗಿರುತ್ತದೆ.

ಮನೆಯಿಂದ ಹೊರಗಡೆ ಹೋಗುವಾಗ ಮನೆಯಲ್ಲಿ ಯಾವುದೆ ಹಣ, ಆಭರಣಗಳನ್ನು ಬಿಟ್ಟು ಹೋಗದೇ ಬ್ಯಾಂಕ್ ಲಾಕರ್‌ ಅಥವಾ ನಂಬಿಕಸ್ಥ ಸಂಬಂಧಿ/ ಸ್ನೇಹಿತರ ಸುಪರ್ದಿಗೆ ನೀಡಿ ಹೋಗಬೇಕು. ಮನೆಯಲ್ಲಿ ರಾತ್ರಿ ವಿದ್ಯುತ್ ದೀಪ ಉರಿಯುವಂತೆ ಯಾವುದಾದರೂ ಒಂದು ರೂಮಿನ ಲೈಟ್ ಆನ್ ಇಟ್ಟು, ಹೋಗಬೇಕು. ಸೋಷಿಯಲ್ ಮೀಡಿಯಾದಲ್ಲಿ ಹೊರಗೆ ಇರುವ ಬಗ್ಗೆ ಸ್ಟೇಟಸ್ ಹಾಕುವ ಬಗ್ಗೆ ಎಚ್ಚರ ವಹಿಸುವುದು.

ಉತ್ತಮ ದರ್ಜೆಯ ಸಿ.ಸಿ ಟಿ.ವಿ, ನವೀನ ಮಾದರಿಯ ಸೈರನ್ ಇನ್ನಿತರ ಉಪಕರಣಗಳನ್ನು ಅಳವಡಿಸುವುದು ಅಲ್ಲದೆ ಸೆಕ್ಯುರಿಟಿ ಗಾರ್ಡ್ ನೇಮಿಸುವುದು ಉತ್ತಮ.

ಅಪರಿಚಿತರು ಮತ್ತು ಅಪರಿಚಿತ ವಾಹನಗಳು  ಮನೆ, ಗ್ರಾಮದ ಸುತ್ತಮತ್ತ ಕಂಡು ಬಂದರೆ   ಗ್ರಾಮದ ಬೀಟ್ ಪಿ.ಸಿ, ಅಧಿಕಾರಿಗಳು ಅಥವಾ ಮಣಿಪಾಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ( 9480805448, 9480805475 ore 0824-270328 )ಗೆ ಕೂಡಲೇ ತಿಳಿಸುವಂತೆ ಅವರು ವಿನಂತಿಸಿದ್ದಾರೆ.


Spread the love