
ಹೆಚ್ 3ಎನ್ 2 ಸೋಂಕು ಪ್ರಕರಣ: ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ – ಡಾ. ಕೆ. ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ 26 ಹೆಚ್ 3ಎನ್ 2 ಸೋಂಕು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರೊಂದಿಗೆ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ 3ಎನ್ 2 ವೈರಸ್ ಆತಂಕಕಾರಿಯಲ್ಲ, ಕರ್ತವ್ಯ ಸಮಯದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟವರು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಅನವಶ್ಯಕವಾಗಿ ಗುಂಪು ಸೇರದಂತೆ ಮತ್ತು ಶುಚಿತ್ವದ ಕಡೆ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿ ದಿನ 2ರಿಂದ 3 ಲೀಟರ್ ಸೇವಿಸುವ ಮೂಲಕ ದೇಹದಲ್ಲಿ ನೀರಿನ ಕೊರತೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಬಿರು ಬೇಸಿಗೆ ಸಂದರ್ಭದಲ್ಲಿ ಮಜ್ಜಿಗೆ, ಎಳನೀರು, ನಿಂಬೆ ಹಣ್ಣಿನ ರಸ ಸೇವಿಸುವಂತೆಯೂ ಜನರಿಗೆ ಸಲಹೆ ನೀಡಲಾಗಿದೆ ಎಂದರು.