ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸುಂಕ ಸಂಗ್ರಹಿಸದಂತೆ ಉಡುಪಿ ಜಿಲ್ಲಾಧಿಕಾರಿಗೆ ಹೋರಾಟ ಸಮಿತಿ ಮನವಿ

Spread the love

ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸುಂಕ ಸಂಗ್ರಹಿಸದಂತೆ ಉಡುಪಿ ಜಿಲ್ಲಾಧಿಕಾರಿಗೆ ಹೋರಾಟ ಸಮಿತಿ ಮನವಿ

ಉಡುಪಿ: ಹೆಜಮಾಡಿ ಟೋಲ್ ಫ್ಲಾಝಾದಲ್ಲಿ ಸುರತ್ಕಲ್ ಟೋಲ್ ನ ಸುಂಕ ಸಂಗ್ರಹಕ್ಕೆ ಅವಕಾಶ ನೀಡಬಾರದು ಹಾಗೂ ತಕ್ಷಣವೇ ಜಿಲ್ಲಾಡಳಿತದ ಸಭೆ ನಡೆಸಬೇಕೆಂದು ಒತ್ತಾಯಿಸಿ ಉಡುಪಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಶನಿವಾರ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಸುರತ್ಕಲ್ ಟೋಲ್ ಗೇಟ್ ನಲ್ಲಿ ಸಂಗ್ರಹಿಸುತ್ತಿದ್ದ ಸುಂಕವನ್ನು ಇನ್ನು ಮುಂದೆ ಹೆಜಮಾಡಿಯ ಟೋಲ್ ಕೇಂದ್ರದಲ್ಲಿ ಸಂಗ್ರಹಿಸಲು ಆದೇಶ ಹೊರಡಿಸಿರುವುದು ಆತಂಕಕಾರಿಯಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೆಜಮಾಡಿಯ ನವಯುಗ್ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದೇಶ ಜಾರಿಯಾದಲ್ಲಿ ಎರಡೂ ಜಿಲ್ಲೆಯ ಜನರಿಗೆ ತೊಂದರೆ ಯಾಗಲಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಜನರ ಮೇಲೆ ಸುಂಕದ ಭಾರ ಅತ್ಯಂತ ಹೆಚ್ಚು ಭಾದಿಸಲಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಪಡುಬಿದ್ರೆಯಿಂದ ಮೂಲ್ಕಿಯ ಆರು ಕಿ.ಮೀ. ಏಕ ಮುಖ ಪ್ರಯಾಣಕ್ಕೆ ಕಾರಿನಲ್ಲಿ 100 ರೂ. ಪಾವತಿಸಬೇಕಾಗುತ್ತದೆ. ಇನ್ನು ಸ್ಥಳೀಯ ಕೆಂಪು ಕಲ್ಲು, ಜಲ್ಲಿ ಮುಂತಾದ ನಿರ್ಮಾಣ ಸಾಮಗ್ರಿಗಳನ್ನು ಸುರತ್ಕಲ್, ಪಡುಬಿದ್ರೆ, ಕಾಪು, ಕಾರ್ಕಳ ಮಧ್ಯೆ ದಿನ ನಿತ್ಯ ಸಾಗಾಟ ಮಾಡುವ ವಾಹನಗಳ ಮೇಲೆ ಬೀಳುವ ದುಬಾರಿ ಟೋಲ್ ಸಾಮಾನ್ಯ ಜನರಿಗೆ ದೊಡ್ಡ ಹೊಡೆತ ಬೀಳಲಿದೆ. ಜನರ ದುಡಿಮೆಯ ಬಹುಪಾಲು ಟೋಲ್ಗೇಟ್ಗಳು ಕಬಳಿಸಿದಲ್ಲಿ ಅವರ ಬದುಕಿನ ಮೇಲೂ ದೊಡ್ಡ ಪರಿಣಾಮ ಆಗಲಿದೆ ಎಂದು ನಿಯೋಗ ದೂರಿದೆ.

ಜಿಲ್ಲಾಡಳಿತ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಹೆದ್ದಾರಿ ಪ್ರಾಧಿಕಾರದ ಆದೇಶ ತಕ್ಷಣಕ್ಕೆ ಜಾರಿಗೆ ಅವಕಾಶ ನೀಡಬಾರದು. ಆದಷ್ಟು ಬೇಗ ಜನಪ್ರತಿ ನಿಧಿಗಳು, ಉಸ್ತುವಾರಿ ಸಚಿವರನ್ನು ಒಳಗೊಂಡ ಜಿಲ್ಲಾಡಳಿತದ ಸಭೆಯನ್ನು ಕರೆದು ಚರ್ಚೆಯನ್ನು ನಡೆಸಬೇಕು. ಆದೇಶದಲ್ಲಿರುವ ನ್ಯೂನತೆಗಳು, ಆದೇಶ ಜಾರಿಯಾದಲ್ಲಿ ಉಂಟಾಗುವ ಪರಿಣಾಮಗಳನ್ನು ಸರಕಾರಕ್ಕೆ ವಿವರಿಸಿ ಹೆಜಮಾಡಿ ಟೋಲ್ ಫ್ಲಾಝಾದಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದೇಶ ಹಿಂಪಡೆಯಲು ಜಿಲ್ಲೆಯ ಜನರ ಪರವಾಗಿ ಬೇಕಾದ ಕ್ರಮಬದ್ದವಾದ ಪ್ರಯತ್ನಗಳನ್ನು ನಡೆಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ಸಂಗ್ರಹ ಆರಂಭಿಸಿದಲ್ಲಿ ಸುರತ್ಕಲ್ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು. ಹೆಜಮಾಡಿ ಟೋಲ್ಗೇಟ್ ಮುಂಭಾಗ ಈಗಾಗಲೆ ಸಾಮೂಹಿಕ ಧರಣಿ ನಡೆಸಿ ಹೋರಾಟಕ್ಕೆ ಚಾಲನೆಯನ್ನು ನೀಡಲಾಗಿದೆ. ಈ ಆದೇಶ ಜಾರಿಯಾದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯಲಿವೆ ಎಂದು ನಿಯೋಗ ಎಚ್ಚರಿಕೆ ನೀಡಿತು. ಮನವಿಯನ್ನು ಅಪರ ಜಿಲ್ಲಾಧಿಕಾರಿ ವೀಣಾ ಸ್ವೀಕರಿಸಿದರು.

ನಿಯೋಗದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕ ಶೇಖರ ಹೆಜಮಾಡಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಕವಿರಾಜ್ ಎಸ್., ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಶ್ರೀನಿವಾಸ್ ಹೆಬ್ಬಾರ್, ಸಾಯಿರಾಜ್ ಕಿದಿಯೂರು, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.


Spread the love