ಹೆಜಮಾಡಿ ಟೋಲ್ ನಲ್ಲಿ  ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿಗೆ ಮನವಿ

Spread the love

ಹೆಜಮಾಡಿ ಟೋಲ್ ನಲ್ಲಿ  ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿಗೆ ಮನವಿ

ಪಡುಬಿದ್ರಿ: ಫೆಬ್ರವರಿ 15ರಿಂದ ದೇಶದಾದ್ಯಂತ ಎಲ್ಲಾ ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯಗೊಳ್ಳಲಿದ್ದು, ಈ ತನಕ ಸ್ಥಳೀಯರಿಗೆ ದೊರೆಯುತ್ತಿದ್ದ ವಿನಾಯಿತಿಯು ರದ್ದುಗೊಳ್ಳುವ ಹಿನ್ನೆಲೆಯಲ್ಲಿ ಬುಧವಾರ ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿಯು ಕಾಪು ತಾಲೂಕಿನ ಹೆಜಮಾಡಿ ಟೋಲ್ಗೆ ಮೆರವಣಿಗೆ ಮೂಲಕ ತೆರಳಿ ಸಂಪೂರ್ಣ ವಿನಾಯಿತಿಗೆ ಹಾಗೂ ಈ ಹಿಂದೆ ಗ್ರಾಮಸ್ಥರಿಗೆ ನೀಡಿದ ಆಶ್ವಾಸನೆಗಳನ್ನು ಪೂರೈಸುವಂತೆ ಮನವಿ ನೀಡಲಾಯಿತು.

ಹೆಜಮಾಡಿಯಲ್ಲಿ ಟೋಲ್ ನಿರ್ಮಾಣ ಸಂದರ್ಭ ಕ್ರಿಯಾ ಸಮಿತಿಯು ಟೋಲ್ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ, ಉದ್ಯೋಗವಕಾಶ, ಕನ್ನಂಗಾರು ಬಳಿ ಸರ್ವಿಸ್ ರಸ್ತೆ, ಶಿವನಗರ ಬಳಿ ಸ್ಕೈವಾಕ್, ಸಮಗ್ರ ದಾರಿದೀಪ ಮತ್ತು ಚರಂಡಿ ವ್ಯವಸ್ಥೆ, ಬಸ್ಸು ತಂಗುದಾಣ ನಿರ್ಮಾಣ ಸಹಿತ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದು, ಟೋಲ್ ಕಂಪನಿ ನವಯುಗ್ ಸಹಿತ ಹೆದ್ದಾರಿ ಇಲಾಖೆ ಎಲ್ಲಾ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಭರವಸೆ ನೀಡಿತ್ತು. ಆದರೆ ಮುಖ್ಯ ಬೇಡಿಕೆಗಳನ್ನು ಈವರೆಗೂ ಕಡೆಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಸ್ಥರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಹೆಜಮಾಡಿ ಟೋಲ್ಗೇಟ್ಗೆ ತೆರಳಿ ಮನವಿ ಸಲ್ಲಿಸಿದ್ದು, 15 ದಿನದೊಳಗೆ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

ಪಡುಬಿದ್ರಿ ಕಡೆಯಿಂದ ಹೆಜಮಾಡಿಗೆ ಬರುವ ವಾಹನಗಳು ಬೀಡು ಬಳಿ ವಿರುದ್ಧ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಕೂಡಲೇ ಬೀಡುವಿನಿಂದ ಕನ್ನಂಗಾರುವರೆಗೆ ಸರ್ವಿಸ್ ರಸೆ ನಿರ್ಮಾಣಗೊಳಿಸಲೇಬೇಕು ಎಂದು ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ ಹೆಜ್ಮಾಡಿ ಆಗ್ರಹಿಸಿದ್ದು, ಈ ಭಾಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಮನವರಿಕೆ ಮಾಡಿದರು.

ಮನವಿ ಸ್ವೀಕರಿಸಿದ ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸರಕಾರದ ನೂತನ ನಿಯಮ ಪ್ರಕಾರ ಫೆ.15ರಿಂದ ದೇಶದಾದ್ಯಂತ ಫಾಸ್ಟ್ಟ್ಯಾಗ್ ಕಡ್ಡಾಯಗೊಳ್ಳಲಿದೆ. ಈ ಸಂದರ್ಭ ಯಾವುದೇ ವಾಹನಗಳಿಗೆ ರಿಯಾಯಿತಿ ಅಸಾಧ್ಯ. ಆದರೂ ಹೆಜಮಾಡಿ ಟೋಲ್ನಲ್ಲಿ ಹೆಜಮಾಡಿ ವಾಸಿಗಳ ವಾಹನಗಳಿಗೆ ಸಂಪೂರ್ಣ ರಿಯಾಯಿತಿ ನೀಡಲು ಕಂಪನಿ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಕಂಪನಿಯ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿದ್ದು, ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಿರುವುದರಿಂದ ಫಾಸ್ಟ್ಟ್ಯಾಗ್ ಮೂಲಕವೇ ಹೆಜಮಾಡಿಯ ವಾಹನಗಳಿಗೆ ಸಂಪೂರ್ಣ ವಿನಾಯಿತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಕನ್ನಂಗಾರು ಬೈಪಾಸ್ ಬಳಿ ಹೆಚ್ಚು ಸಮಸ್ಯೆಯಾಗುತ್ತಿರುವ ಬಗ್ಗೆ ಗಮನ ಹರಿಸಲಾಗಿದ್ದು, ಶೀಘ್ರ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸೂಚಿಸಲಾಗುವುದು. ಇದೇ ರೀತಿ ಗ್ರಾಮಸ್ಥರ ಎಲ್ಲಾ ಬೇಡಿಕೆಗಳ ಬಗ್ಗೆ ಕಂಪನಿ ಮುಖ್ಯಸ್ಥರ ಗಮನ ಸೆಳೆದು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭ ಪಡುಬಿದ್ರಿಯಲ್ಲಿ ದೇವಳಕ್ಕೆ ತೆರಳುವ ಹೆದ್ದಾರಿ ಡಿವೈಡರ್ನಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರೊಬ್ಬರು ಗಮನ ಸೆಳೆದರು. ಈ ಡಿವೈಡರ್ ಶೀಘ್ರ ಮುಚ್ಚಲಾಗುವುದು ಎಂದು ಭರವಸೆ ನೀಡಲಾಯಿತು.

ಕ್ರಿಯಾ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಮ್, ಸದಸ್ಯರಾದ ಶೇಖಬ್ಬ ಕೋಟೆ, ರೋಲ್ಫಿ ಡಿಕೋಸ್ತಾ, ಪ್ರಣೇಶ್ ಹೆಜ್ಮಾಡಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಮುಖಂಡರುಗಳಾದ ಸುಭಾಷ್ ಸಾಲ್ಯಾನ್, ಸುಧೀರ್ ಕರ್ಕೇರ, ವಾಮನ ಕೋಟ್ಯಾನ್ ನಡಿಕುದ್ರು, ಗ್ರಾಪಂ ಸದಸ್ಯರಾದ ಪಾಂಡುರಂಗ ಕರ್ಕೇರ, ರೇಷ್ಮಾ, ಶಿವ ಪೂಜಾರಿ, ನೀಲೇಶ್ ಮತ್ತು ಮೋಹನ್, ಸಚಿನ್ ನಾಯಕ್, ಹಂಝ ಕನ್ನಂಗಾರ್, ಅಬ್ದುಲ್ ರೆಹಮಾನ್, ಹನೀಫ್, ಇಕ್ಬಾಲ್, ಅಬ್ಬಾಸ್ ಹಾಜಿ ಕೋಟೆ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.


Spread the love