ಹೆದ್ದಾರಿಗಳಲ್ಲಿ ಇ.ವಿ ಚಾರ್ಜಿಂಗ್ ಸ್ಟೇಷನ್‌ ಸ್ಥಾಪನೆ: ವಿ.ಸುನೀಲ್ ಕುಮಾರ್

Spread the love

ಹೆದ್ದಾರಿಗಳಲ್ಲಿ ಇ.ವಿ ಚಾರ್ಜಿಂಗ್ ಸ್ಟೇಷನ್‌ ಸ್ಥಾಪನೆ: ವಿ.ಸುನೀಲ್ ಕುಮಾರ್

ಮೈಸೂರು: ರಾಜ್ಯ ಹಾಗೂ ರಾಷ್ಟೀಯ ಹೆದ್ದಾರಿ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇ.ವಿ.ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಆವರಣದಲ್ಲಿ ಕರ್ನಾಟಕ ವಿದ್ಯುತ್ ಸರಬರಾಜು ನಿಗಮಿತ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಿತ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರಧಾನಮಂತ್ರಿಗಳು ಹಸಿರು ಇಂದನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹಸಿರು ಇಂಧನದ ಬಳಕೆಯ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ಬಳಕೆ ಕಡಿಮೆ ಮಾಡುವುದರ ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡಬಹುದಾಗಿದೆ. ಇದರಿಂದ ಎಲೆಕ್ಟ್ರಾನಿಕ್ಸ್ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇಲಾಖೆಯ ವತಿಯಿಂದ ಒಂದು ಮುಕ್ಕಾಲು ವರ್ಷದಲ್ಲಿ ದಾಖಲೆಯ ಪ್ರಮಾಣದ 350 ಕ್ಕೂ ಹೆಚ್ಚು ಸಬ್ ಸ್ಟೇಷನ್‌ಗಳನ್ನು ತೆರೆಯಲಾಗಿದೆ. ಚೆಸ್ಕಾಂ ವ್ಯಾಪ್ತಿಯಲ್ಲಿ 13 ಹೊಸ ಶಾಖಾ ಕಛೇರಿಗಳನ್ನು ತೆರೆಯಲಾಗುತ್ತಿದೆ. ಬೆಳಕು ಯೋಜನೆಯಡಿ ಒಂದೂವರೆ ವರ್ಷದಲ್ಲಿ 2.5 ಲಕ್ಷ ಮನೆಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಮೃತ ಜ್ಯೋತಿ ಯೋಜನೆಯಡಿ ಎಸ್.ಸಿ, ಎಸ್.ಟಿ ಕುಟುಂಬದವರಿಗೆ ಪ್ರತಿ ತಿಂಗಳು 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇಂಧನ ಇಲಾಖೆಯಲ್ಲಿ ವಾರ್ಷಿಕ ರೂ 16 ಸಾವಿರ ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ಈ ನಡುವೆಯೂ ಇಲಾಖೆಯನ್ನು ಲಾಭದ ಹಾದಿಯಲ್ಲಿ ನಡೆಸಲು ಹಲವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ಟಿ.ಸಿ.ಗಳು ಕೆಟ್ಟುಹೋದರೆ ಸರಿಪಡಿಸಲು ಹೊಸ ಟಿ.ಸಿ ಅಳವಡಿಸಲು ವಿಳಂಬವಾಗುತ್ತಿತ್ತು. ಆದರೆ ಟಿ.ಸಿ.ಕೆಟ್ಟು ಹೋದ 24 ಗಂಟೆಯಲ್ಲಿ ಬದಲಾಯಿಸುವ ರೀತಿ ಮಾಡಲಾಗಿದೆ. ಇದರಲ್ಲಿ ಶೇ 90 ರಷ್ಟು ಸಾಧನೆ ಮಾಡಲಾಗಿದೆ. ರೈತರಿಗೆ ದಿನದಲ್ಲಿ 7 ಗಂಟೆಗಳು ಪಂಪ್‌ಸೆಟ್‌ಗೆ ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗಿಂತ ವಿದ್ಯುತ್ ಬೇಡಿಕೆ ಹೆಚ್ಚಿದೆ. 2022 ರ ಮಾರ್ಚ್ 23 ರಂದು 14800 ಮೆಗಾವ್ಯಾಟ್ ದಾಖಲೆಯ ಬೇಡಿಕೆ ಇತ್ತು ಅದನ್ನು ಪೂರೈಸಿದ್ದೇವೆ. ಈ ವರ್ಷದ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ 15500 ರಿಂದ 16000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಬರಬಹುದೆಂದು ಅಂದಾಜಿಸಲಾಗಿದ್ದು ಈ ಸವಾಲನ್ನು ಎದುರಿಸಲು ಇಲಾಖೆ ತಯಾರಿ ನಡೆಸುತ್ತಿದೆ ಎಂದು ತಿಳಿಸಿದರು.

ಇಲಾಖೆಯ ಸೌಲಭ್ಯ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು. ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ತಿಂಗಳ 3 ನೇ ಶನಿವಾರ ಗ್ರಾಮಾಂತರ ಪ್ರದೇಶಗಳಲ್ಲಿ ಇಲಾಖೆಯ ವತಿಯಿಂದ ವಿದ್ಯುತ್ ಅದಾಲತ್‌ನ್ನು ನಡೆಸಲಾಗುತ್ತಿದೆ. ಕರ್ನಾಟಕದ ಜನತೆಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ನೀಡುವುದು ಇಲಾಖೆಯ ಗುರಿಯಾಗಿದೆ ಎಂದು ತಿಳಿಸಿದರು.

ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪಸಿಂಹ ಅವರು ಮಾತನಾಡಿ ನರೇಂದ್ರ ಮೋದಿಯವರು 2014 ರಲ್ಲಿ ದೇಶದ ಚುಕ್ಕಾಣಿ ಹಿಡಿದಾಗ ದೇಶದಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಇಂದು ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಯಾವುದೇ ಹಳ್ಳಿ ಇಲ್ಲ ಎಂದ ಅವರು ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇ.ವಿ.ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವಂತೆ ಸಚಿವರಲ್ಲಿ ಮನವಿ ಮಾಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ ಚೆಸ್ಕಾಂ 2005 ರಲ್ಲಿ ಪ್ರಾರಂಭವಾಯಿತು. ರೈತರ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 7 ಗಂಟೆಗಳ ವಿದ್ಯುತ್ ನೀಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಬೋರೆವೆಲ್‌ಗಳಿಗೆ ಪಂಪು ಮೋಟಾರ್‌ಗಳನ್ನು ಅಳವಡಿಸುತ್ತಿದೆ. ತ್ವರಿತವಾಗಿ ವಿದ್ಯುತ್ ಸಂಪರ್ಕ ನೀಡಬೇಕು. ನಿಗಮಗಳಲ್ಲಿ ಸಿಬ್ಬಂದಿ ಕೊರತೆ ಇದ್ದು ನೇಮಕಾತಿ ಮಾಡಿಕೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ವಹಿಸಿದ್ದರು.

ಮಹಾಪೌರರಾದ ಶಿವಕುಮಾರ, ಮುಡಾ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್, ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಯವಿಭವಸ್ವಾಮಿ ಸೇರಿದಂತೆ ಇಂಧನ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here