ಹೆದ್ದಾರಿ ದುರಸ್ತಿ ಮಾಡಬೇಕಾದ ಸಂಸದೆ ಶೋಭಾ ಕರಂದ್ಲಾಜೆ ಅಡಗಿ ಕುಳಿತಿದ್ದಾರೆ: ವಿನಯ್ ಕುಮಾರ್ ಸೊರಕೆ  

Spread the love

ಹೆದ್ದಾರಿ ದುರಸ್ತಿ ಮಾಡಬೇಕಾದ ಸಂಸದೆ ಶೋಭಾ ಕರಂದ್ಲಾಜೆ ಅಡಗಿ ಕುಳಿತಿದ್ದಾರೆ: ವಿನಯ್ ಕುಮಾರ್ ಸೊರಕೆ  

ಹಿರಿಯಡ್ಕ: ಉಡುಪಿ ಕಾರ್ಕಳದ ಮುಖ್ಯರಸ್ತೆ ಪರ್ಕಳದಿಂದ ಗುಡ್ಡೆಯಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ನೇತೃತ್ವದಲ್ಲಿ ಗುರುವಾರ ಆತ್ರಾಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು‌.

ಕಾಂಗ್ರೆಸ್‌ ನ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಜೆಪಿ ಸರಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಹೆದ್ದಾರಿ ತಡೆದು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆಯನ್ನು‌ ಶೀಘ್ರವೇ ದುರಸ್ತಿಗೊಳಿಸದಿದ್ದರೆ, ಸಂಸದರು, ಶಾಸಕರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಜಿಲ್ಲೆಯಲ್ಲಿ ರಸ್ತೆಯ ದುರಾವಸ್ಥೆಯಿಂದ ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ. ಆದರೆ, ಹೆದ್ದಾರಿಯನ್ನು ದುರಸ್ತಿ ಮಾಡಬೇಕಾದ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಅಡಗಿ ಕುಳಿತಿದ್ದಾರೆ. ನಮ್ಮ ಸಂಸದೆಯನ್ನು ಹುಡುಕಿಕೊಡಿಯೆಂದು ಪೊಲೀಸ್ ಠಾಣೆಗೆ ದೂರು ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ನಮ್ಮ ಸಂಸದೆಗೆ ಸತ್ತವರ ಧರ್ಮ ನೋಡಿ ರಾಜಕೀಯ ಮಾಡುವುದು ಬಿಟ್ಟರೆ, ಜನರ ಸಮಸ್ಯೆ ಆಲಿಸುವ ಸೌಜನ್ಯ ಕೂಡ ಇಲ್ಲ‌. ನಾವು ಏನು ಅನ್ಯಾಯ ಮಾಡಿದ್ದೇವೆ. ನಾವೇನಾದರೂ ಪಾಕಿಸ್ತಾನದಲ್ಲಿ ಇದ್ದೇವಾ ಎಂದು ಪ್ರಶ್ನಿಸಿದರು.

40 ಪರ್ಸೆಂಟ್ ಕಮಿಷನ್, 70ಪರ್ಸೆಂಟ್ ಬೆಲೆ ಏರಿಕೆ, ನಿರುದ್ಯೋಗ ಬಿಜೆಪಿ ಸರ್ಕಾರದ ಕೊಡುಗೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತತೆಯನ್ನು ಕಿತ್ತು ಹಾಕುವ ಹುನ್ನಾರ ದೇಶಾದ್ಯಂತ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ಮುಖಂಡರಾದ ಚರಣ್ ವಿಠ್ಠಲ್ ಕುದಿ, ಇಸ್ಮಾಯಿಲ್ ಆತ್ರಾಡಿ, ಶಶಿಧರ್ ಜತನ್ನ, ಉಮೇಶ್ ಕಾಂಚನ್, ಲಕ್ಷ್ಮೀ ನಾರಾಯಣ ಪ್ರಭು, ಗುರುದಾಸ್ ಭಂಡಾರಿ, ದಿಲೀಪ್ ಹೆಗ್ಡೆ, ಕಿರಣ್ ಹೆಗ್ಡೆ, ಸಂತೋಷ್ ಶೆಟ್ಟಿ, ಸೌರಭ್ ಭಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here