Home Mangalorean News Kannada News ಹೆದ್ದಾರಿ , ಸರ್ವಿಸ್ ರಸ್ತೆ ಆಗುವ ತನಕ  ಟೋಲ್ ಸ್ಥಗಿತಗೊಳಿಸಿ; ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಆಗ್ರಹ

ಹೆದ್ದಾರಿ , ಸರ್ವಿಸ್ ರಸ್ತೆ ಆಗುವ ತನಕ  ಟೋಲ್ ಸ್ಥಗಿತಗೊಳಿಸಿ; ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಆಗ್ರಹ

Spread the love

ಹೆದ್ದಾರಿ , ಸರ್ವಿಸ್ ರಸ್ತೆ ಆಗುವ ತನಕ  ಟೋಲ್ ಸ್ಥಗಿತಗೊಳಿಸಿ; ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಆಗ್ರಹ

 ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಪ್ರಾಧಿಕಾರದ ಕಾನೂನಿನಂತೆ ಯಾವುದೇ ಸೌಲಭ್ಯಗಳಿಲ್ಲ. ಹೆದ್ದಾರಿ ಕೆಟ್ಟು ಹೋಗಿ ಪ್ರಾಣ ಹಾನಿ ಸಂಭವಿಸುತ್ತಿದೆ. ಹೀಗಿರುವಾಗ ಮೂರು ಕಡೆಗಳಲ್ಲಿ ಟೋಲ್ ಪಡೆಯುತ್ತಿರುವುದು ದರೋಡೆಗೆ ಸಮಾನವಾಗಿದೆ. ತಕ್ಷಣ ಸುರತ್ಕಲ್ , ಬಂಟ್ವಾಳ ಟೋಲ್ ಕೇಂದ್ರವನ್ನು ಮುಚ್ಚ ಬೇಕು ಶಾಸಕ ಮೊಯ್ದಿನ್ ಬಾವಾ ಆಗ್ರಹಿಸಿದರು.

ಹೆದ್ದಾರಿ 66ರ ಹೊನ್ನಕಟ್ಟೆ, ಬೈಕಂಪಾಡಿ, ಕೂಳೂರು ಮತ್ತಿತರೆಡೆ ಹೊಂಡದಿಂದ ತುಂಬಿರುವ ಹೆದ್ದಾರಿಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ಸೋಮವಾರ ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ ನೇತೃತ್ವದಲ್ಲಿ ಹೊನ್ನಕಟ್ಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೆದ್ದಾರಿಯಲ್ಲಿ 12 ಕಿ.ಮೀ ಇರುವ ಮಂಗಳೂರು ತಲುಪಲು ಒಂದೆರಡು ಗಂಟೆ ಪಡೆಯುತ್ತದೆ ಎಂದಾದರೆ ವೇಗದ ಹೆದ್ದಾರಿಗಳು ಇರುವುದು ಯಾಕೆ.ಮಳೆ ನಿಂತು ಇಷ್ಟು ದಿನವಾದರೂ ಹೊಂಡ ಮುಚ್ಚುವಲ್ಲಿ ಇಲಾಖೆ ವಿಫಲವಾಗಿದೆ. ಕೇಂದ್ರ ಸರಕಾರ ಇದೀಗ ಬಿಜೆಪಿ ಕೈಯಲ್ಲಿದ್ದು ಸಂಸದರು ಬಿಜೆಪಿ ಪಕ್ಷದವರೇ ಇದ್ದಾರೆ. ಈ ರಸ್ತೆಯಲ್ಲಿಯೇ ಒಡಾಡುತ್ತಿದ್ದರೂ ದುರಸ್ತಿಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕ ಬಾವಾ ಆರೋಪಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಕೆಟ್ಟು ಹೋದ ರಸ್ತೆಗೆ ಟೋಲ್ ಪಡೆಯುವುದಕ್ಕೆ ಯುವ ಕಾಂಗ್ರೆಸ್‍ನ ವಿರೋಧವಿದೆ.ತಕ್ಷಣ ಮುಕ್ಕ ಟೋಲ್ ಗೇಟ್ ರದ್ದು ಪಡಿಸ ಬೇಕು. ರಸ್ತೆ ದುರಸ್ತಿ ,ಸರ್ವಿಸ್ ರಸ್ತೆ ನಿರ್ಮಾಣ ಸಹಿತ ಮೂಲ ಸೌಕರ್ಯ ಒದಗಿಸುವವರೆಗೆ ಟೋಲ್ ನಿರಾಕರಣೆಯ ಹೋರಾಟವನ್ನು ಪಕ್ಷ ಮಾಡಲಿದೆ. ಟೋಲ್ ಮುಂಭಾಗ ಪ್ರತಿಭಟನೆ ನಡೆಸಲಿದೆ. ಯಾವುದೇ ಗಂಭೀರ ಪರಿಣಾಮ ಉಂಟಾದರೂ ಹೆದ್ದಾರಿ ಇಲಾಖೆ ಮತ್ತು ಸಂಸದ ನಳಿನ್ ಕುಮಾರ್ ನೇರ ಹೊಣೆಗಾರರು ಎಂದು ಘೋಷಿಸಿದರು.

ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಮಾತನಾಡಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಂಬರ್ ಒನ್ ಸಂಸದ ಎಂದು ಹೆಮ್ಮೆ ಪಟ್ಟು ಹೇಳುತ್ತಾರೆ. ಆದರೆ ಅವರ ಕ್ಷೇತ್ರದ ಹೆದ್ದಾರಿ ದುರಾವಸ್ಥೆ ಗಮನಿಸಿದಾಗ ಆ ಸ್ಥಾನ ಸಿಕ್ಕಿದ ಬಗ್ಗೆ ಸಂಶಯ ಕಾಡುತ್ತದೆ. ಇನ್ನು ಮಾತನಾಡಿದರೆ ಬೆಂಕಿ ಕೊಡುತ್ತೇವೆ ಎಂದು ಹೇಳುತ್ತಾರೆ. ಇದರ ಬದಲು ರಸ್ತೆ ದುರಸ್ತಿಗೆ ಶ್ರಮ ವಹಿಸಿ ಸಾರ್ವಜನಿಕರಿಗೆ ಉಪಕಾರ ಮಾಡಿದರೆ ಮತ ಹಾಕಿದ ಮತದಾರನಿಗೂ ನೆಮ್ಮದಿಯಾಗುತ್ತದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಉತ್ತಮ್ ಆಳ್ವ, ಹಬೀಬ್, ಸೊಹೈಲ್, ಶೊಯಿಬ್, ರವಿಶ್ರೀಯಾನ್, ಶಕುಂತಳಾ ಕಾಮತ್ ,ಪುರುಷೋತ್ತಮ್ ಚಿತ್ರಾಪುರ, ಕುಮಾರ್ ಮೆಂಡನ್, ಗುಲ್ಜಾರ್ ಬಾನು, ಬಾವಾ ,  ಸೊಹೈಲ್, ಜೈಸನ್,ಅಕ್ಬರ್ ಮುಕ್ಕ, ಪುರುಷೋತ್ತಮ್ ಮುಕ್ಕ, ಇಲ್ಯಾಸ್, ಹರೀಶ್ ಬಂಗೇರ, ರಾಜೇಶ್ ಕುಳಾಯಿ, ಸಚಿನ್ ಅಡಪ, ಅಶ್ರಫ್ ಅಡ್ಯಾರ್,ಅದ್ದು ಜಲೀಲ್, ಮಲ್ಲಿಕಾರ್ಜುನ್, ಶ್ರಿಧರ್ ಪಂಜ, ರೂಪೇಶ್ ರೈ, ವರುಣ್ ಅಂಬಟ್,  ಆನಂದ್ ಅಮೀನ್, ರೆಹಮಾನ್ ಕುಂಜತ್ತಬೈಲ್, ಆಲಿ ಕೂಳೂರು ಮತ್ತಿತರರು ಉಪಸ್ಥಿತರಿದ್ದರು.

 


Spread the love

Exit mobile version