ಹೆಬ್ರಿ, ಮುದ್ರಾಡಿ ಪಿಡಿಒರಿಂದ ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಕಟ್ಟಡ – ತನಿಖೆಗೆ ಅನ್ಸಾರ್‌ ಅಹ್ಮದ್‌ ಆಗ್ರಹ

Spread the love

ಹೆಬ್ರಿ, ಮುದ್ರಾಡಿ ಪಿಡಿಒರಿಂದ ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಕಟ್ಟಡ – ತನಿಖೆಗೆ ಅನ್ಸಾರ್‌ ಅಹ್ಮದ್‌ ಆಗ್ರಹ

ಉಡುಪಿ: ಉಡುಪಿ ಜಿಲ್ಲೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ನಿವಾಸಿ ಪ್ರಸ್ತುತ ಹೆಬ್ರಿ ಹಾಗೂ ಮುದ್ರಾಡಿ ಗ್ರಾಮ ಪಂಚಾಯತ್ ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸದಾಶಿವ ಸೇರ್ವೆಗಾರ್ ರವರು ಪೆರ್ಡೂರು ಗ್ರಾಮದ ಸರ್ವೆ ನಂಬ್ರ 296 ಅರಣ್ಯ ಇಲಾಖೆಗೆ ಸೇರಿರುವ ಜಾಗದಲ್ಲಿ ಅಕ್ರಮ ಕಟ್ಟಡ ( ಮನೆ )ವನ್ನು ನಿರ್ಮಿಸುತ್ತಿದ್ದು ಸಂಬಂಧಿತ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್‌ ಅಹಮ್ಮದ್‌ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಪ್ರೆಸ್‌ ಕ್ಲಬ್‌ ನಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಸದಾಶಿವ ಸೇರ್ವೆಗಾರ್‌ ಅವರು ಸರ್ವೆ ನಂಬ್ರ 73/3 ರಲ್ಲಿ ಕಟ್ಟಡ ನಿರ್ಮಿಸಲು ಪರವಾನಿಗೆಯನ್ನು ಪಡೆದುಕೊಂಡಿರುತ್ತಾರೆ. ಆದರೆ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಕಟ್ಟಡವನ್ನು ಅರಣ್ಯ ಇಲಾಖೆಗೆ ಸೇರಿದ ಸರ್ವೇ ನಂಬ್ರ 296 ರಲ್ಲಿ ನಿರ್ಮಿಸುತ್ತಿದ್ದಾರೆ. ಸದ್ರಿ ಸರ್ಕಾರಿ ಜಾಗದಲ್ಲಿ ನಿರ್ಮಿಸುತ್ತಿರುವ ಅಕ್ರಮ ಕಟ್ಟಡಕ್ಕೆ ಅವರದೇ ಹೆಸರಿನ ದಾಖಲೆಗಳನ್ನು ಸಲ್ಲಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆದು ಬಿಲ್ ಪಾವತಿ ಮಾಡುತ್ತಾ ಬಂದಿರುತ್ತಾರೆ.

ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಹೆಬ್ರಿ ವಲಯ ಅರಣ್ಯಾಧಿಕಾರಿ ಯವರು ಸದಾಶಿವ ಸೇರ್ವೆಗಾರ್ ರವರ ಮೇಲೆ ಈ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಅಲ್ಲದೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಕೆಡವುದರ ಬಗ್ಗೆ ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಇದರ ಬಗ್ಗೆ ಅರಣ್ಯ ಸಚಿವರಿಗೂ ದೂರು ಸಲ್ಲಿಸಲಾಗುವುದು ಎಂದರು.

ಸದಾಶಿವ ಸೇರ್ವೆಗಾರ್ ರವರನ್ನು ಕೂಡಲೇ ಸೇವೆಯಿಂದ ಅಮಾನತು ಗಳಿಸಬೇಕಾಗಿ ಉಡುಪಿ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ. ಈ ಬಗ್ಗೆ ಕಂದಾಯ ಸಚಿವರಿಗೂ ಮನವಿ ಯನ್ನು ಸಲ್ಲಿಸಲಾಗುವುದು ಎಂದರು.

ಸದಾಶಿವ ಸೇರ್ವೆಗಾರ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಹಾಗೂ ಮುದ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಇವರು ಹಲವಾರು ಅಕ್ರಮಗಳನ್ನು ಎಸಗಿರುವ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಆರೋಪಗಳು ಕೇಳಿಬರುತ್ತಿದೆ. ಹಾಗಾಗಿ ಅದರ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಲೋಕಾಯುಕ್ತರಿಗೂ ಈ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದರು. ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಕಟ್ಟಡಕ್ಕೆ ಹಣ ಯಾವ ಮೂಲದಿಂದ ಬಂತು ಎಂಬ ಬಗ್ಗೆಯೂ ಲೋಕಾಯುಕ್ತ ಇಲಾಖೆ ತನಿಖೆ ಮಾಡಬೇಕಾಗಿದೆ ಎಂದರು

ಈ ಮೇಲಿನ ನ್ಯಾಯಯುತವಾದ ಮನವಿಯನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸದಾಶಿವ ಸರ್ವೆಗರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಚರ್ಚಿಸಿ ಅವರು ಸೇವೆ ಸಲ್ಲಿಸುತ್ತಿರುವ ಪಂಚಾಯತ್ ನ ಮುಂದೆ ಹಾಗೂ ತಹಸೀಲ್ದಾರ್ ಕಚೇರಿಯ ಮುಂದೆ ಏಕಕಾಲದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮೋದ್‌ ಉಚ್ಚಿಲ್‌, ಶಾಹಿಲ್‌, ಅರುಣ್‌ ಕುಮಾರ್‌ ಉಪಸ್ಥೀತರಿದ್ದರು.


Spread the love