ಹೆಬ್ರಿ: ಶಾಂತಿನಿಕೇತನ ಯುವ ವೃಂದದ ವಿದ್ಯಾರ್ಥಿ ಘಟಕ ಉದ್ಘಾಟನೆ

Spread the love

ಹೆಬ್ರಿ: ಶಾಂತಿನಿಕೇತನ ಯುವ ವೃಂದದ ವಿದ್ಯಾರ್ಥಿ ಘಟಕ ಉದ್ಘಾಟನೆ
 

ಹೆಬ್ರಿ: ಹಿಂದೆಲ್ಲಾ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯ ಜನರು ಬ್ಯಾಂಕಿಂಗ್ ಕ್ಷೇತ್ರದತ್ತ ಹೆಚ್ಚು ಆಕರ್ಷಿತರಾಗಿದ್ದರು. ಆದರೆ ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದತ್ತ ಒಲವು ತೋರುವುದು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪರೀಕ್ಷೆಗಳಿಗೆ ಅಣಿಯಾಗುವಂತೆ ಸಿದ್ಧತೆಗಳು ನಡೆದರೆ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸಹಕಾರ ನೀಡಲಾಗುವುದು ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ಹೇಳಿದರು.

ಅವರು ಕುಚ್ಚೂರು ಕುಡಿಬೈಲಿನಲ್ಲಿ ಶಾಂತಿನಿಕೇತನ ಯುವ ವೃಂದದ ನೂತನ ವಿದ್ಯಾರ್ಥಿ ಘಟಕವನ್ನು  ಉದ್ಘಾಟಿಸಿ ಮಾತನಾಡಿದರು.

ಶಾಂತಿನಿಕೇತನ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆ. ಈ ಭಾಗದಲ್ಲಿ ವಿನೂತನ ಕಾರ್ಯಕ್ರಮಗಳೊಂದಿಗೆ ಪ್ರತಿಯೊಬ್ಬರ ಶ್ರೇಯಸ್ಸಿಗಾಗಿ ದುಡಿಯುತ್ತಿದೆ. ವಿದ್ಯಾರ್ಥಿಗಳ ದೆಸೆಯಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಅಡ್ಯಂತಾಯ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಬ್ರಿ ಸಬ್‌ ಇನ್‌ಸ್ಪೆಕ್ಟರ್ ಸುದರ್ಶನ್ ದೊಡ್ಡಮನಿ ಮಾತನಾಡಿ ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತೀ ಶೀಘ್ರವೇ ಫಲಿತಾಂಶದ ಪಡೆಯುವ ಮನಸ್ಥಿತಿಯಲ್ಲಿ ಹೆಚ್ಚಿನವರಿಗೆ ಉದ್ಯೋಗ ದೊರೆಯುತ್ತಿಲ್ಲ. ಜನರು ತಾಳ್ಮೆ ಕಾಯ್ದುಕೊಂಡು ಪರೀಕ್ಷೆ ಎದುರಿಸಿದಾಗ ಯಶಸ್ಸು ಸಿಗುತ್ತದೆ ಎಂದರು

ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್ ಕುಡಿಬೈಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ರಾಷ್ಟ್ರಮಟ್ಟದ ತರಬೇತುದಾರರಾದ ಉಪನ್ಯಾಸಕಿ ಶ್ರೀ ಮುದ್ರಾಡಿ ‘ನಿಮ್ಮನ್ನು ನೀವು ತಿಳಿದುಕೊಳ್ಳಿ’ ವಿಷಯದ ಮೇಲೆ ಕಾರ್ಯಗಾರ ನಡೆಸಿಕೊಟ್ಟರು.

ಕುಚ್ಚೂರು ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತ ಶೆಟ್ಟಿ, ಶಾಂತಿನಿಕೇತನದ ವಿಜಯಕುಮಾರ್, ಜಯಕರ, ದೀಕ್ಷಿತ್ ನಾಯಕ್, ನಾಗರಾಜ, ಶ್ರೀನಿವಾಸ್ ಶೆಟ್ಟಿ, ಮಹೇಶ್, ಗಣೇಶ್, ರಾಜಶ್ರೀ, ರೇಷ್ಮಾ, ವಿನೋದ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.


Spread the love

Leave a Reply