ಹೆಬ್ರಿ: ಶಿವಪುರ ದೇವಸ್ಥಾನ ಕಳವು ಪ್ರಕರಣದ ಆರೋಪಿಗಳ ಬಂಧನ

Spread the love

ಹೆಬ್ರಿ: ಶಿವಪುರ ದೇವಸ್ಥಾನ ಕಳವು ಪ್ರಕರಣದ ಆರೋಪಿಗಳ ಬಂಧನ

ಕಾರ್ಕಳ: ಹೆಬ್ರಿ ಠಾಣಾ ವ್ಯಾಪ್ತಿಯ ಶಿವಪುರ ಬ್ಯಾಣ ಗದ್ದಿಗೆ ದೇವಸ್ಥಾನದ ಗದ್ದಿಗೆ ಅಮ್ಮನವರ ಮೂರ್ತಿ ಹಾಗೂ ಮೂರ್ತಿಯ ಮೈಮೇಲಿದ್ದ ಚಿನ್ನಾಭರಣ ಮತ್ತು ಕಾಣಿಕೆ ಹುಂಡಿ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ದೇರೆಬೈಲು ನಿವಾಸಿ ಕುಮಾರ @ರಾಜು (36) ಮತ್ತು ಭದ್ರಾವತಿ ನಿವಾಸಿ ರವಿಕುಮಾರ್ @ಕುಂಟರವಿ @ಗುಡ್ಡೆ ರವಿ (32) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಪುರಾತನ ಕಾಲದ ದೇವಿಯ ವಿಗ್ರಹ, 20 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಅಕ್ಟೀವ್ ದ್ವಿಚಕ್ರವಾ ವಾಹನ, ವಶಪಡಿಸಿಕೊಂಡಿದ್ದು ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ. 1.70 ಲಕ್ಷ ಆಗಿರುತ್ತದೆ.

ಆರೋಪಿ ಕುಮಾರನ ವಿರುದ್ದ ಕಾರವಾರದ ಕದ್ರಾ, ಗ್ರಾಮಾಂತರ, ಬೆಂಗಳೂರು ಸಿಟಿ ಕಬ್ಬನ್ ಪಾರ್ಕ್, ಚಿಕ್ಕಮಗಳೂರು ಗ್ರಾಮಾಂತರ, ಬಸವನಳ್ಳಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 14 ಕಳವು ಪ್ರಕರಣಗಳು ದಾಖಲಾಗಿವೆ.

ಇನ್ನೋರ್ವ ಆರೋಪಿ ರವಿಕುಮಾರ್ ವಿರುದ್ದ ಬೆಂಗಳೂರು ಸಿಟಿ ಕಬ್ಬನ್ ಪಾರ್ಕ್, ಹೊನ್ನಾಳಿ ಹಾಗೂ ಚೆನ್ನಗಿರ ಪೊಲೀಸ್ ಠಾಣೆಗಳಲ್ಲಿ ಒಟ್ಟು 3 ಪ್ರಕರಣಗಳು ದಾಖಲಾಗಿವೆ.

ಕಾರ್ಯಾಚರಣೆಯನ್ನು ಜಿಲ್ಲಾ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಮತ್ತು ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ನಿರ್ದೇಶನದಂತೆ ಕಾರ್ಕಳ ಡಿವೈಎಸ್ಪಿ ವಿಜಯ್ ಪ್ರಸಾದ್, ಕಾರ್ಕಳ ಸಿಪಿಐ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಹೆಬ್ರಿ ಪಿ ಎಸ್ ಐ ಸುದರ್ಶನ ದೊಡಮನಿ, ಹೆಬ್ರಿ ಠಾಣಾ ಸಿಬಂದಿಯವರಾದ ಅಣ್ಣಪ್ಪ ಕರ್ಜೆ, ರಾಜಕುಮಾರ್, ಸದಾನಂದ ನಾಯ್ಕ, ಅಜೆಕಾರು ಹಾಗೂ ಕಾರ್ಕಳ ನಗರ ಠಾಣೆಯ ಕ್ರೈಂ ಸಿಬಂದಿ ನಡೆಸಿದ್ದು ಉಡುಪಿ ಜಿಲ್ಲಾ ಎಸ್ಪಿ ಕಚೇರಿಯ ಬೆರಳಚ್ಚು ವಿಭಾಗ ಹಾಗೂ ತಾಂತ್ರಿಕ ವಿಭಾಗದ ಸಿಬಂದಿ ಸಹಕರಿಸಿದ್ದಾರೆ.


Spread the love