ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ನವೀಕೃತ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

Spread the love

ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ನವೀಕೃತ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಕುಂದಾಪುರ: ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿಸಬೇಕು ಎನ್ನುವ ಸದುದ್ದೇಶದಿಂದ‌ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಆರೇಳು ಲಕ್ಷ ರೂ. ವೆಚ್ಚದಲ್ಲಿ ಒಟ್ಟು ಹತ್ತು ಕಂಪ್ಯೂಟರ್ ಗಳನ್ನು ಕೊಡಮಾಡಿದ ಉದ್ಯಮಿ ವೀರೇಶ್ ಪೂಜಾರಿಯವರ ಕಾರ್ಯ ಶ್ಲಾಘನೀಯ ಎಂದು ವಿವಿವಿ ಮಂಡಳಿ ಅಧ್ಯಕ್ಷ, ಮಾಜಿ‌ ಶಾಸಕ ಕೆ. ಗೋಪಾಲ ಪೂಜಾರಿ ನುಡಿದರು.

ಬುಧವಾರ ವಿ.ವಿ.ವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆ ಹೆಮ್ಮಾಡಿಯಲ್ಲಿ ಜರುಗಿದ ನವೀಕೃತ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣವನ್ನು ಸದ್ವಿನಿಯೋಗ‌ಮಾಡಿಕೊಂಡು ಈ ಸಂಸ್ಥೆಯ ಹೆಸರನ್ನು ಉತ್ತಮ ಫಲಿತಾಂಶ ಕೊಡುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದರು.

ನವೀಕೃತ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ವೀರೇಶ್ ಪೂಜಾರಿಯವರು, ವಿದ್ಯೆ ಹಣ ಕೊಟ್ಟು ಗಳಿಸುವ ಸಂಪತ್ತಲ್ಲ. ಶ್ರದ್ದಾ ಭಕ್ತಿಯಿಂದ ಓದಿದರೆ ನಾವು ಎಲ್ಲವನ್ನೂ ಸಾಧಿಸಬಹುದು. ನಾವು ಏನೇ ದಾನ ಧರ್ಮ ಮಾಡಿದರೂ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ದಾನ ಅದು ಶಾಶ್ವತವಾಗಿ ಉಳಿಯುತ್ತದೆ ಎಂದರು.

ಶಾಲೆಯ ಮೂಲಭೂತ ಸೌಕರ್ಯಕಳಿಗೆ ಸಹಕರಿಸಿದ ಶಾಲೆಯ ಹಳೆ ವಿದ್ಯಾರ್ಥಿ, ಉದ್ಯಮಿ ಮನೀಶ್ ಶೆಟ್ಟಿ ಮುಳ್ಳಿಕಟ್ಟೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು

ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ, ಜನತಾ ಪ್ರೌಢ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿ‌ ದೇವಾಡಿಗ ಮಾತನಾಡಿದರು.

ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಜು ಪೂಜಾರಿ ಕಾಳೂರಮನೆ, ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಪೋಷಕ ಪ್ರತಿನಿಧಿ ಬಾಬು ಪೂಜಾರಿ ಕಟ್ಟು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳಾವರ್ ಪ್ರಸ್ತಾಪಿಸಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ದಿನಾಕರ್ ಧನ್ಯವಾದವಿತ್ತರು, ಶಿಕ್ಷಕ ಶ್ರೀಧರ್ ಗಾಣಿಗ ನಿರೂಪಿಸಿದರು.


Spread the love