
ಹೆಲ್ಪಿಂಗ್ ಹ್ಯಾಂಡ್ಸ್ ನಿಂದ ಸಂಗ್ರಹಿಸಿದ ವೈದ್ಯಕೀಯ ನೆರವು ಹಸ್ತಾಂತರ
ಕುಂದಾಪುರ: ಸಾಧನೆ ಅಥವಾ ಸೇವೆಯ ಗುಣವಿದ್ದಾಗ ಮಾತ್ರ ಒಂದು ಸಂಸ್ಥೆ ದೊಡ್ಡ ಶಕ್ತಿಯಾಗಿ ಸಮಾಜದಲ್ಲಿ ಹೊರ ಹೊಮ್ಮುತ್ತದೆ. ದಾನಿಗಳ ಸಹಕಾರದಿಂದ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಮೂಲಕ ನೊಂದವರ ಬದುಕಿಗೊಂದು ಬೆಳಕು ನೀಡುವ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಕೆಲಸ ಶ್ಲಾಘನೀಯ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ್ ಎಂ ಶೆಟ್ಟಿ ಹೇಳಿದರು.
ಕೋಟೇಶ್ವರ ಕೊಡಿ ಹಬ್ಬ ಜಾತ್ರೆಯಲ್ಲಿ 6 ಮಂದಿ ಪುಟ್ಟ ಮಕ್ಕಳ ಚಿಕಿತ್ಸೆಗಾಗಿ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಸಂಸ್ಥಾಪಕ ಪ್ರದೀಪ್ ಮೊಗವೀರ ಅವರು ತಂಡದ ಸದಸ್ಯರೊಂದಿಗೆ ವಿಭಿನ್ನ ವೇಷ ತೊಟ್ಟು ಸಂಗ್ರಹಿಸಿದ ಹಣವನ್ನು ದೇವಳದ ಸಭಾಂಗಣದಲ್ಲಿ ಜರುಗಿದ ಹಸ್ತಾಂತರ ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಕುಟುಂಬಿಕರಿಗೆ ಹಣವನ್ನು ವಿತರಿಸಿ ಅವರು ಮಾತನಾಡಿದರು.
ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಸಂಸ್ಥಾಪಕ ಪ್ರದೀಪ್ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯರಾದ ಸುರೇಶ್ ಬೆಟ್ಟಿನ್, ಮಂಜುನಾಥ್ ಆಚಾರ್ ಅರಸರಬೆಟ್ಟು, ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ, ಪತ್ರಕರ್ತ ಗಣೇಶ್ ಬೀಜಾಡಿ, ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಗೌರವಾಧ್ಯಕ್ಷ ರವೀಂದ್ರ ರಟ್ಟಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಕೋಟೇಶ್ವರ ಕೊಡಿ ಹಬ್ಬ ಜಾತ್ರೆಯ 3 ದಿನದ ಪ್ರಯತ್ನದಲ್ಲಿ ದಾನಿಗಳ ಸಹಕಾರದಿಂದ ಒಟ್ಟಾದ 2,29,979 ರೂಪಾಯಿ ದೇಣಿಗೆಯನ್ನು 6 ಪುಟ್ಟ ಮಕ್ಕಳಿಗೆ ಹಸ್ತಾಂತರ ಮಾಡಲಾಯಿತು. ಹಾಗು ದೇಣಿಗೆ ಸಂಗ್ರಹ ಕಾರ್ಯದಲ್ಲಿ ವಿಶೇಷವಾಗಿ ಸಹಕರಿಸಿದ ವೀರಾಂಜನೇಯ ಚಂಡೆ ಬಳಗ ಕಂಚಗೋಡು, ಶ್ರೀ ಮಹಾಕಾಳಿ ಚಂಡೆ ಬಳಗ ಕುಂದಾಪುರ, ಶ್ರೀ ಮಹಾಕಾಳಿ ಚಂಡೆ ಬಳಗ ಗಂಗೊಳ್ಳಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂದೀಪ್ ಮೊಗವೀರ ಹೊದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು.