
ಹೊನ್ನಾವರ ಪೊಲೀಸ್ ಠಾಣೆಯಲ್ಲೇ ಸಾವಿಗೆ ಶರಣಾದ ಆರೋಪಿ; ಪಿಐ, ಪಿಎಸ್ಐ ಸೇರಿ ಐವರು ಅಮಾನತು
ಹೊನ್ನಾವರ: ವಿಚಾರಣೆಗೆ ಕರೆತಂದ ಆರೋಪಿ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯ ಪಿಐ, ಪಿಎಸ್ಐ ಸೇರಿ ಐವರು ಅಮಾನತುಗೊಂಡಿದ್ದಾರೆ.
ಪಾಲೀಷ್ ಮಾಡುವ ನೆಪದಲ್ಲಿ ಚಿನ್ನ ಕದಿಯುತ್ತಿದ್ದ ಆರೋಪದ ಮೇಲೆ ಬಿಹಾರ ಮ಼ೂಲದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ದಿಲೀಪ್ ಮಂಡಲ್ ಎಂಬಾತ ನಿನ್ನೆ ವಿಷ ಸೇವಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಆರೋಪಿ ದಿಲೀಪ್ ಮಂಡಲ್ ಠಾಣೆಯಲ್ಲಿ ವಿಚಾರಣೆ ವೇಳೆ ಪೊಲೀಸರಲ್ಲಿ ತನಗೆ ನೀರು ಬೇಕು ಎಂದು ಹೇಳಿ, ನೀರು ಕುಡಿಯಲು ಹೋಗಿದ್ದ. ಈ ವೇಳೆ ನೀರನೊಂದಿಗೆ ವಿಷ ಮಿಶ್ರಣ ಮಾಡಿ ಸೇವಿಸಿದ್ದಾನೆ. ಕೃತ್ಯ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
ಪ್ರಕರಣದಲ್ಲಿ ಹೊನ್ನಾವರ ಠಾಣೆಯ ಪಿಐ ಮಂಜುನಾಥ್, ಕ್ರೈಂ ಪಿಎಸ್ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿಗಳಾದ ಮಹಾವೀರ, ರಮೇಶ್, ಸಂತೋಷ್ ಅಮಾನತುಗೊಂಡಿದ್ದಾರೆ.
ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.